೧
ಗಂಧದ ಗೆಳತಿ
ರೇಶಿಮೆ ಅಂಗಿ ಚಿಟ್ಟೆ
ಎಲ್ಲಿಗೆ ಹಾರಿ ಹೊಂಟೆ
ಹೂವಿಂದ್ಹೂವಿಗೆ ಹಾರುವೆ
ಏನು ಹೊತ್ತು ತರುವೆ
ಜೋಡು ಪಕ್ಕ ಬಿಚ್ಚಿ
ರಸ ಹೀರತಿ ಚುಚ್ಚಿ
ಗಂಧದ ಗೆಳತಿ ಬಾ ಬಾ
ಚಂದದ ಅಂಗಿ ತಾ ತಾ
ರೇಶಿಮೆ ಅಂಗಿ ಚಿಟ್ಟೆ
ಎಲ್ಲಿಗೆ ಹಾರಿ ಹೊಂಟೆ
೨
ಸವಿಗಾರ
ರಾಮಾ ರಾಮಾ ರಾಮಾ
ನಮ್ಮ ಗಿಣಿ ರಾಮಾ
ಹಚ್ಚ ಹಸಿರು ಪುಚ್ಚ
ಅಚ್ಚ ಕೆಂಪು ಚುಂಚ
ಹಣ್ಣು ತಿನ್ನುವ ಸವಿಗಾರ
ಮಾತಿನ ಮಲ್ಲ ಬಹದೂರ
ಅರಗಿಣಿ ಅಂತ ಅಂತಾರ
ಪಂಜರದಾಗ ಹಾಕ್ಯಾರ
ರಾಮಾ ರಾಮಾ ರಾಮಾ
ನಮ್ಮ ಗಿಣಿ ರಾಮಾ
೩
ಸರದಾರ
ನವಿಲೆ ನವಿಲೆ ನವಿಲೆ
ಗುಡು ಗಡು ಮುತ್ತ್ಯಾನ ಕರೀಲೆ
ರಂಗು ರಂಗಿನ ಬಣ್ಣ
ಹತ್ತು ಸಾವಿರ ಕಣ್ಣ
ನಾಟ್ಯ ಕಲಿತ ನಟವರ
ಬಣ್ಣದ ಗರಿಯ ಸರದಾರ
ಮುತ್ತಿನ ಕೊಡೆಯ ಚಿತ್ತಾರ
ಹುತ್ತಿನ ಹುಳವೆ ಆಹಾರ
ನವಿಲೆ ನವಿಲೆ ನವಿಲೆ
ಗುಡು ಗುಡು ಮುತ್ಯಾನ ಕರೀಲೆ
೪
ಸೊಳ್ಳೆ
ಸೊಂಯ್ ಸೊಂಯ್ ಸೊಳ್ಳೆ
ಮೈತುಂಬ ಗುಳ್ಳೆ
ರೊಜ್ಜು ರಾಡಿ ಹೊಲಸು
ಇದ್ದರೆ ನಿನಗೆ ಸೊಗಸು
ಸೂಜಿ ಸೊಂಡಿ ಚುಚ್ಚಿ
ರಕ್ತ ಹೀರತಿ ಗಚ್ಚಿ
ಥಂಡಿ ಥಂಡಿ ಜ್ವರ
ಹಬ್ಬಿಸೂವಂತ ಶೂರ
ಸೊಂಯ್ ಸೊಂಯ್ ಸೊಳ್ಳೆ
ಮೈತುಂಬ ಗುಳ್ಳೆ
೫
ಆಕಳು
ಅಂಬಾ ಅಂಬಾ ಆಕಳು
ಕೊಟ್ಟಿಗೆ ತುಂಬ ಒಕ್ಕಲು
ಉದ್ದ ಕೊಂಬು ಕೊಳಗ
ನೀನು ನಮ್ಮ ಬಳಗ
ಬಿಂದಿಗೆ ತುಂಬ ಹಾಲು
ಕರುವಿಗದರ ಪಾಲು
ನಮ್ಮ ಪುಣ್ಯ ಕೋಟಿ
ಯಾರು ನಿನಗೆ ಸಾಟಿ
ಅಂಬಾ ಅಂಬಾ ಆಕಳು
ಕೊಟ್ಟಿಗೆ ತುಂಬ ಒಕ್ಕಲು
೬
ಗೂ ಗೂ ಗೂಗಿ
ಗೂ ಗೂ ಗೂ ಗೂಗಿ
ಹೆದರಸತಿ ಏನು ಕೂಗಿ
ಮಿಂಚುವ ಹಳದಿ ಕಣ್ಣ
ತಿಳಿಯ ಕೆಂಪು ಬಣ್ಣ
ಬಾವುಗ ಬೆಕ್ಕಿನ ರೂಪ
ಹುಳ ತಿಂತಿ ಗಪ ಗಪ
ಹಗಲಿ ಗಿಡದಲಿ ಕೂತು
ರಾತ್ರಿಯೆಲ್ಲ ಗಸ್ತು
ಗೂ ಗೂ ಗೂ ಗೂಗಿ
ಹೆದರಸತಿ ಏನು ಕೂಗಿ
೭
ಗುಬ್ಬಿ ಗೂಡು
ಗುಬ್ಬಿ ಗುಬ್ಬಿ ಗೂಡು ಕಟ್ಟಿ
ಅದರಾಗೆರಡು ತತ್ತಿ ಇಟ್ಟಿ
ದಿನವೂ ತಪ್ಪದ ಕಾವು ಕೊಟ್ಟಿ
ಜೋಡ ಮರಿಗಳ ಸಾಕಿಬಿಟ್ಟಿ
ಈಟ ಈಟ ಗುಟ್ಟಿ ಕೊಟ್ಟಿ
ಹಾರು ಆಟ ಕಲಿಸಿಬಿಟ್ಟಿ
ನಮ್ಮ ಮನೆಯಲಿ ಸೇರಿಬಿಟ್ಟಿ
ನನ್ನ ನಿನ್ನ ಗೆಳೆತನ ಗಟ್ಟಿ
ಗುಬ್ಬಿ ಗುಬ್ಬಿ ಗೂಡು ಕಟ್ಟಿ
ಅದರಾಗೆರಡು ತತ್ತಿ ಇಟ್ಟಿ
೮
ಬೆಳ್ಳಿ ಚುಕ್ಕಿ
ಬಿಳಿಯ ಬೆಳ್ಳಕ್ಕೀ
ಮಿನುಗೊ ಬೆಳ್ಳಿ ಚುಕ್ಕಿ
ಬೆಳ್ಳ ಬೆಳ್ಳನೆ ಬಣ್ಣ
ಯಾರ ಬಳದಾರಣ್ಣ
ಕೊಕ್ಕು ಚೊಕ್ಕ ಚಿನ್ನ
ಕ್ಯಾದಗಿ ಎಸಳೇನಣ್ಣ
ನನಗೂ ರೆಕ್ಕೆ ಹಚ್ಚು
ಚಂದದ ಪುಚ್ಚ ಚುಚ್ಚು
ಬಿಳಿಯ ಬೆಳ್ಳಕ್ಕಿ
ಮಿನುಗೊ ಬೆಳ್ಳಿ ಚುಕ್ಕಿ
೯
ಕೋಗಿಲೆ
ಕುಹೂ ಕುಹೂ ಕೋಗಿಲೆ
ನಿಮ್ಮ ಅವ್ವನ್ನ ಕರೀಲೆ
ಹೊಳೆವ ಕಪ್ಪು ಬಣ್ಣ
ಮಾಟ ಎಂಥ ಚೆನ್ನ
ಚೈತ್ರ ಬಂತು ನೋಡು
ಕುಹೂ ಕುಹೂ ಹಾಡು
ಅಳಬ್ಯಾಡ ನೀ ಪರಪುಟ್ಟ
ಬಾ ನಮ್ಮ ಸಂಗಾಟ
ಕುಹೂ ಕುಹೂ ಕೋಗಿಲೆ
ನಿಮ್ಮ ಅವ್ವನ್ನ ಕರೀಲೆ
೧೦
ಕಾಗಿ
ಕಾ ಕಾ ಕಾ ಕಾಗಿ
ಬೀಗರ ಕರೀತಿ ಕೂಗಿ
ಕರಿಯ ಡಾಂಬರ ಬಣ್ಣ
ಆದರೂ ಮಿಂಚುವದಣ್ಣ
ಅಗಳು ಕಂಡರೆ ಚೀರಿ
ಬಳಗವೆಲ್ಲ ಸೇರಿ
ಬೇವಿನ ಗಿಡಕೆ ಹಾರಿ
ಮಾಳಿಗೆ ಕುಂಬಿ ಏರಿ
ಕಾ ಕಾ ಕಾ ಕಾಗಿ
ಬೀಗರ ಕರೀತಿ ಕೂಗಿ
೧೧
ಕೋಳಿ
ಕೂ ಕೂ ಕೂ ಕೋಳಿ
ಬೆಳಗಾಯಿತು ಏಳಿ
ದಿನವೂ ಬೆಳ್ಳಿಯ ತತ್ತಿ
ಅದರಲಿ ತುಂಬಿದೆ ಶಕ್ತಿ
ಕರಿ ಬಿಳಿ ಕೆಂದ ಬಣ್ಣ
ಬಡವರ ಮನೆಯ ಚಿನ್ನ
ಕು ಕು ಕು ಕುಕ್ಕಿ
ಕಾಳ ತಿಂತಿ ಹೆಕ್ಕಿ
ಕೂ ಕೂ ಕೂ ಕೋಳಿ
ಬೆಳಗಾಯಿತು ಏಳಿ
೧೨
ಗುಬ್ಬಿ
ಚಿಂವ್ ಚಿಂವ್ ಗುಬ್ಬಿ
ಏನು ಹೇಳಲಿ ಸುಬ್ಬಿ
ಕಾಂಕ್ರೆಟ್ ಕಾಡಿನಲ್ಲಿ
ಗೂಡ ಕಟ್ಟತಿ ಎಲ್ಲಿ
ಜೋಡಿ ಮರಿಗಳ ಸಾಕಿ
ಮಾಡತಿ ಹೆಂಗ ಜೋಕಿ
ಕಾಳು ಕಡಿಗಳ ಹೆಕ್ಕಿ
ತಿನ್ನಲಾಕಿಲ್ಲ ಕುಕ್ಕಿ
ಚಿಂವ್ ಚಿಂವ್ ಗುಬ್ಬಿ
ಏನು ಹೇಳಲಿ ಸುಬ್ಬಿ
೧೩
ಮಂಗ
ಗೂಕ್ ಗೂಕ್ ಮಂಗ
ಲಾಗಾ ಹಾಕೋದ್ ಹೆಂಗ
ರಾಮನ ಸೇವೆ ಬಂಟ
ಲಂಕೆಗೆ ಹಾರಿ ಹೊಂಟ
ಕೊಡುವೆ ಹಣ್ಣು ಹಂಪಲ
ಮಾಡಬೇಡ ಗದ್ದಲ
ಕೊಡೊ ನಿನ್ನ ಬಾಲ
ಒಂದೆರಡ ದಿನಕ ಸಾಲ
ಗೂಕ್ ಗೂಕ್ ಮಂಗ
ಲಾಗಾ ಹಾಕೋದ್ ಹೆಂಗ
೧೪
ಮಳೆರಾಯ
ಹೊಯ್ಯೋ ಹೊಯ್ಯೋ ಮಳೆರಾಯ
ಇಷ್ಟೇಕ ಕಾಡತಿ ದಮ್ಮಯ್ಯ
ತಟ್ಟಂತ ನೆಲಕ್ಕ ಸುರಿದಿಲ್ಲ
ಸಿಟ್ಟೇನ್ ನಿನಗ ನಮ್ಮ್ಯ್ಮಾಲ
ಸುಣ್ಣ ಕೊಡುವೆ ಸುರಿಯಪ್ಪ
ಬಣ್ಣ ಕೊಡುವೆ ಬಾರಪ್ಪ
ಕಳ್ಳೇ ಮಳ್ಳೇ ಆಡಲಾಕ
ಕೈ ಕೈ ಹಿಡಿದು ಕುಣಿಲಾಕ
ಹೊಯ್ಯೇ ಹೊಯ್ಯೋ ಮಳೆರಾಯ
ಇಷ್ಟೇಕೆ ಕಾಡತಿ ದಮ್ಮಯ್ಯ
೧೫
ಬಿಸ್ಕಿಟು
ದುಂಡನೆ ಮಾರಿ
ಬಿಸ್ಕಿಟು
ಪುಟ್ಟ ಪಾಪ
ತಿಂತಿತ್ತು
ಪಟ್ಟಂತ ಕೈ
ಜಾರಿ ಹೋಯ್ತು
ಮುಗಿಲ ಮೇಲೆ
ತೇಲೋಯ್ತು
[ಉತ್ತರ : ಚಂದಿರ}
೧೬
ಬೇಸಿಗೆ
ಬಂತು ಬಂತು ಬೇಸಿಗೆ
ಉಸಿರು ಕಟ್ಟಿತು ಗಾಳಿಗೆ
ನೀರು ನೀರು ಎಂದು ನೀರನು
ಬಾಯಿ ಬಾಯಿ ಬಿಡಿಸುತ್ತ
ಬಂತು ಬಂತು ಬೇಸಿಗೆ
ಚಾಚಿ ಬೆಂಕಿ ನಾಲಿಗೆ
ಗಾಳಿ ಗಾಳಿ ಎಂದು ಗಾಳಿಗೆ
ಗೋಳು ಗೋಳನು ಹೊಯ್ಸುತ್ತ
ಬಂತು ಬಂತು ಬೇಸಿಗೆ
ಉಸಿರು ಕಟ್ಟಿತು ಗಾಳಿಗೆ
೧೭
ಲೆಫ್ಟು ರೈಟು
ಲೆಫ್ಟು ರೈಟು ಸೈನ್ಯ ಬಂತು
ಡ್ರಿಲ್ ಮಾಡುತ್ತ
ಹ್ಯಾಟು ಬೂಟು ಹಾಕಿಕೊಂಡು
ಸಲೂಟ್ ಮಾಡುತ್ತ
ಡಂಡಂ ಡಂಡಂ ಡಂಡಂ ಎಂದು
ಡೋಲು ಬಾರಿಸುತ್ತ
ತುತು ತುತು ತುತು ತು
ತ್ತೂರಿ ಊದುತ
ಹಲವು ವಾದ್ಯದಲ್ಲಿ ರಾಷ್ಟ್ರ
ಗೀತೆ ನುಡಿಸುತ್ತ
ಧ್ವಜಕೆ ನಮಿಸಿ ದೇಶಕಾಗಿ
ಸೇವೆ ಮಾಡುತ
೧೮
ಕರಡಿ ಮರಿ
ಕರಡಿ ಮರಿಯು
ಕಾಡಿನೊಳಗೆ ವಾಸ ಮಾಡಿತ್ತು
ಕಿತ್ತಳೆ ಹಣ್ಣು
ಕೀಳಲೆಂದು ಹೊಂಚು ಹಾಕಿತ್ತು
ಕುಳಿತುಕೊಂಡು
ಕೂಗಿ ಕೂಗಿ ಬಳಗ ಕರೆದಿತ್ತು
ಕೆಳೆಯ ಗುಂಪು
ಕೇಕೆ ಹಾಕಿ ಓಡಿ ಬಂದಿತ್ತು
ಕೈಯಲೊಂದು
ಕೊಡಲಿ ಹಿಡಿದು ಗಿಡವ ಹತ್ತಿತ್ತು
ಕೋಲಿನಿಂದ
ಕೌಲಿ ಮುರಿದು ಹಣ್ಣ ತಿಂದಿತ್ತು
ಕಂದ ಕೇಳಿ
ಕಕಾ ಬಳ್ಳಿ ಕಲಿತು ಕೊಂಡಿತು
೧೯
ನಾಗಪ್ಪ
ಬುಸ್ ಬುಸ್ ಬುಸ್ ಬುಸುಗುಡು ನಾಗ
ಹೊಟ್ಟಿ ಹೊಸಿತಿ ಯಾಕಪ್ಪ
ಜೋಡೆಳೆ ನಾಲಿಗೆ ಇದ್ದರೂ ನೀನು
ಕಾಲೆ ಇಲ್ಲದ ಹೆಳವಪ್ಪ
ಇರುವೆ ಕಟ್ಟಿದ ಹುತ್ತಿನ ಮನೆಯಲಿ
ವಾಸ ಮಾಡತಿ ಯಾಕಪ್ಪ
ಪುಂಗಿಯ ಊದಲು ಹೆಡೆಯನು ಬಿಚ್ಚಿ
ಮೈ ಮರೆಯುವ ಹುಚ್ಚಪ್ಪ
ಹೆದರಲು ಬೇಡ ಹೆದರಿಸ ಬೇಡ
ನಮ್ಮ ಗೆಳೆಯ ನೀನಪ್ಪ
ಬಟ್ಟಲು ತುಂಬ ಹಾಲನು ಕೊಡುವೆ
ಕುಡಿದು ಹೋಗಲು ಬಾರಪ್ಪ
೨೦
ಹಸಿರೇ ಹಸಿರು
ಒಂದು ಎರಡು ಮೂರು
ನೆಲದಲಿ ಬೀಜ ಊರು
ಮೂರು ನಾಲ್ಕು ಐದು
ಬಾವಿ ನೀರನು ಸೇದು
ಐದು ಆರು ಏಳು
ಬಣ್ಣದ ಹೂವಿನ ಎಸಳು
ಏಳು ಎಂಟು ಒಂಬತ್ತು
ಗಿಡದಲಿ ಹಣ್ಣು ತುಂಬಿತ್ತು
ಒಂಬತ್ತು ಹತ್ತು ಹನ್ನೊಂದು
ಹಸಿರೇ ಹಸಿರು ಎಂದೆಂದು
೨೧
ಪೆದ್ದ
ಅರಳೆ ಕೂದಲ
ಮೋಟು ಬಾಲದ
ಪೆದ್ದನು ಈತನು ನೋಡಣ್ಣ
ಥಂಡಿಯ ತಡೆಯಲು
ಕಂಬಳಿ ನೇಯಲು
ಈತನ ಕೂದಲು ಬೇಕಣ್ಣ
ನೆಲದಲಿ ಮುಖವನು
ಇಟ್ಟರೆ ಸಾಕು
ಮೇಯುವದಷ್ಟೇ ಗೊತ್ತಣ್ಣ
ಒಂದರ ಹಿಂದೆ
ಇನ್ನೊಂದಾಗಿ
ಕೂಗುತ ನಡೆವನು ಕೇಳಣ್ಣ
೨೨
ತುಂಟಿ
ನನ್ನ ತಂಗಿ ತುಂಟಿಯು
ಬಹಳ ಜಗಳಗಂಟಿಯು
ಸೊನ್ನೆಗೆ ಸೊನ್ನೆಯ
ಸಾಲನು ಸೇರಿಸಿ
ಮುತ್ತಿನ ಸರವನು ಮಾಡಿದಳು
ಮುತ್ತಿನಂತಹ ಅಕ್ಷರ ನೋಡು
ಎನ್ನುತ ಸರಸದಿ ತೋರಿದಳು
ಕೊಂಬು ಇಲ್ಲದ
ಸೊನ್ನೆಯ ಸಾಲನು
ಹರುಷದಿ ಅಮ್ಮನು ನೋಡಿದಳು
ತಂಗಿ ಜಾಣ್ಮೆಗೆ ಮೆಚ್ಚಿ ಅಮ್ಮ
ಮುತ್ತನೊಂದ ನೀಡಿದಳು
೨೩
ಕರಿ ಬೆಕ್ಕು
ಕರಿಯ ಬೆಕ್ಕು
ಕಾಲು ಚಾಚಿ ಮಲಗಿಕೊಂಡಿತ್ತು
ಕಿರಿಚು ಇಲಿಯು
ಕೀರಿ ಕೀರಿ ಹಾಡು ಹಾಡಿತ್ತು
ಕುರುಡು ಬೆಕ್ಕು
ಕೂಗಿದಾಗ ಎಚ್ಚರಾಯಿತು
ಕೆರಳು ದನಿಯ
ಕೇಳಿ ಇಲಿಯು ಓಡಿ ಹೋಯಿತು
ಕೈಯ ಕಡಬು
ಕೊರಳ ಚಕ್ಲಿ ಜಾರಿ ಬಿದ್ದಿತು
ಕೋಟಿ ತುಂಡು
ಕೌದಿಯಲ್ಲಿ ನುಸುಳಿ ಕೊಂಡಿತು
ಕಂಡ ಇಲಿಯು
ಕಾಣದಂತೆ ಮಾಯವಾಯಿತು
ಕಕಾ ಬಳ್ಳಿ
ಕಲಿತ ಕಂದ ಹರುಷ ತಾಳಿತು
೨೪
ತುತ್ತು
ಒಂದು ಒಂದು ಎರಡು
ಮಣ್ಣು ಹದ ಮಾಡು
ಎರಡು ಎರಡು ನಾಲ್ಕು
ಬೀಜ ಊರ ಬೇಕು
ಮೂರು ಮೂರು ಆರು
ನೆಲದಲಿ ಮೊಳಕೆ ಚಿಗುರು
ನಾಲ್ಕು ನಾಲ್ಕು ಎಂಟು
ಮೆಂತೆ ಪಲ್ಲೆದ ಗಂಟು
ಐದು ಐದು ಹತ್ತು
ರೊಟ್ಟಿಗೊಂದು ತುತ್ತು
೨೫
ಗಮ್ಮತ್ತು
ಶಾಲೆಗೆ ಸೂಟಿ ಇವತ್ತು
ಅಡುವ ಆಟಕೆ ಗಮ್ಮತ್ತು
ಪಾಠಲೆಕ್ಕ ತಲೆಚಿಟ್ಟು
ಪುರಸೊತ್ತಿಲ್ಲ ಒಂದಿಷ್ಟು
ಬಣ್ಣದ ತುತ್ತೂರಿ ಹಳೆದಾತು
ಕ್ರಿಕೆಟ್ ಬ್ಯಾಟು ಮುರದೋತು
ಹೀ ಮ್ಯಾನು ರಾಬೋಟು
ಟಿ ವಿ ನೋಡುವೆ ತುಸುಹೊತ್ತು
ವಾರಕ್ಕೊಂದೆ ರವಿವಾರ
ಯಾಕ ಹಿಂಗ ಮಾಡ್ಯಾರ
ಶಾಲೆಯ ಕಾಟ ತಪ್ಪಿಸಿ
ಇರಬಾರದ್ಯಾಕ ನಾಲ್ಕಾರ
೨೬
ಮಳೆ
ಕಡಲ ನೀರು ಕಾದು ಕಾದು
ಮೋಡವಾಯಿತು
ಕರಿಯ ಮೋಡ ಕೂಡಿ ಕೂಡಿ
ಮಳೆಯ ಸುರಿಸಿತು
ಹಳ್ಳ ಕೊಳ್ಳ ತುಂಬಿ ನೀರು
ನೀರೇ ಹರಿಯಿತು
ನೆಲವು ಆಗ ಹಚ್ಚ ಹಸಿರು
ಸೀರೆ ತೊಟ್ಟಿತು
ಗಿಡದ ತುಂಬ ಬಣ್ಣ ಚೆಲ್ಲಿ
ಹೂವು ಅರಳಿತು
ಅಲ್ಲಿ ಇಲ್ಲಿ ಎಲ್ಲ ಕಡೆಗೆ
ಕಂಪು ಹರಡಿತು
೨೭
ಪುಟ್ಟನ ಪ್ರಶ್ನೆ -೧
ಪುಟ್ಟ- ಸೂರ್‍ಯ ನೀನು ಯಾವತ್ತು
ಬೆಂಕಿ ಉಗಳತಿ ಯಾಕಿಂತು
ಸೂರ್‍ಯ- ನಾನು ಉರಿದರೆ ಏನಾಯ್ತು
ಬೆಳಕನು ಕೊಡುವೆ ಸಾಕಷ್ಟು
ಪುಟ್ಟ- ರಾತ್ರಿಯಾದರೆ ಬೇಸತ್ತು
ಮಲಗುವೆ ಏನು ತುಸು ಹೊತ್ತು
ಸೂರ್‍ಯ- ನಿದ್ರೆ ಬಾರದು ಎನಗೆಷ್ಟು
ಆಲಸಿಯಲ್ಲ ನಿಮ್ಮಷ್ಟು
೨೮
ಪುಟ್ಟನ ಪ್ರಶ್ನೆ-೨
ಪುಟ್ಟ _ ಚಂದಿರ ನಿನಗೆ ತಂಪುಂಟು
ಹಗಲಲಿ ಯಾರ ಭಯವುಂಟು
ಬೆಳಕೆ ಇಲ್ಲ ಎಳ್ಳಷ್ಟು
ಏನಿದು ಹೇಳು ನಿನಗುಟ್ಟು
ಚಂದಿರ _ ತಿರುಗುವೆ ಭೂಮಿಯ ಮೈಸುತ್ತು
ಸ್ವಂತ ಬೆಳಕು ಎಲ್ಲಿ ಬಂತು
ಸೂರ್‍ಯನ ಬೆಳಕನೆ ನಾ ಹೊತ್ತು
ಬಿಂಬಿಸಿ ತೋರುವೆ ತಂಪೊತ್ತು
೩೦
ಆಟ ಆಡು
ಆಡು ಆಡು
ಆಟ ಆಡು
ಆಡು ಆಡು
ಕ್ರಿಕೆಟ್ ಆಡು
ಮಾಡು ಮಾಡು
ಬೌಲ್ ಮಾಡು
ಓಡಿ ಬಂದು ಫಾಸ್ಟ ಮಾಡು
ಹೊಡಿ ಹೊಡಿ
ಜೋರ ಹೊಡಿ
ಫೀಲ್ಡರ್ ತಪ್ಪಿಸಿ ಬಾಂಡರಿ ಹೊಡಿ
ಬಾರಿಸು ಬಾರಿಸು
ಎತ್ತಿ ಬಾರಿಸು
ಗೆರೆ ದಾಟಿ ಸಿಕ್ಸರ್ ಬಾರಿಸು
ಹಿಡಿ ಹಿಡಿ
ಕ್ಯಾಚ್ ಹಿಡಿ
ಫಸ್ಟ್ ಬಾಲ್‌ಗೆ ವಿಕೆಟ್ ಪಡಿ
ಹೊಡಿ ಹೊಡಿ
ಚಪ್ಪಳಿ ಹೊಡಿ
ಆಟ ಆಡಿ ಖುಷಿ ಪೆಡಿ
೩೧
ಡೊಳ್ಳು ಹೊಟ್ಟೆ ಗಣಪ
ಗಣಪ ಬಂದ ಗಣಪ
ಚವತಿ ಚಲುವ ಗಣಪ
ಡೊಳ್ಳು ಹೊಟ್ಟೆ
ಕುಳ್ಳ ಮೂರ್ತಿ
ಅಡ್ಡಾ ದಿಡ್ಡಿ ಗಣಪ
ಸುರುಳಿ ಸೊಂಡಿ
ಕೋರೆ ಹಲ್ಲು
ಮರದ ಕಿವಿಯ ಟೊಣಪ
ಕರಿದ ಕಡಬು
ಹುರಿದ ಲಾಡು
ತಿಂಡಿ ಪೋತ ಗಣಪ
ತಿಂದು ತಿಂದು
ಹೊಟ್ಟೆ ಒಡದರು
ಆಸೆ ಬಿಡದ ಟೊಣಪ
ತಂಟೆ ತರಲೆ
ತುಂಟ ಜಾಣ್ಮೆ
ವಿದ್ಯಾ ಬುದ್ದಿ ಗಣಪ
ವರುಷ ವರುಷ
ಚವತಿ ದಿವಸ
ಹಾಜರಾಗುವ ಟೊಣಪ
೩೧
ಪುಟ್ಟಿ ಬುಟ್ಟಿ
ನಸುಕಲಿ ಎದ್ದು
ಕವನ ಬರೆಯಲು
ಕುಳಿತಳು ನಮ್ಮ ಪುಟ್ಟಿ
ಬರದೇ ಬರೆದಳು
ಹರಿದೇ ಹರಿದಳು
ತುಂಬಿತು ಕಸದ ಪುಟ್ಟಿ
೩೨
ಪುಟ್ಟ ಕವಿ
ಕೈಯಲಿ ಕುಂಚ
ಹಿಡಿದು ಪುಟ್ಟ
ಬರೆಯಲು ಕುಳಿತ ಚಿತ್ರ
ತಿದ್ದಿ ತೀಡಿ
ಬರೆದು ಬಿಟ್ಟ
ಗಾಂಧಿದೊಂದು ಚಿತ್ರ
ಉದ್ದನೆ ಮೂಗು
ದುಂಡ ಚಾಳೀಸು
ಕೈಯಲೊಂದು ಬಡಿಗೆ
ಬತ್ತಲೆ ಮೈಗೆ
ತುಂಡು ಪಂಚೆ
ಹಾಸು ಬೀಸಿನ ನಡಿಗೆ
ಬೋಳು ತಲೆಗೆ
ಅಂಟಿಕೊಂಡಿದೆ
ಆನೆಯಂಥ ಕಿವಿಯು
ಚಿತ್ರ ಕವಿತೆ
ಬರೆದ ಪುಟ್ಟ
ಆಗೆಬಿಟ್ಟ ಕವಿಯು
೩೩
ಒಗಟುಗಳು
೧
ನನ್ನ ಗೆಳೆಯರೆಂಥ ಜೋಡಿ
ಅಗಲಲಾರರು ಎಂದಿಗೂ
ಅದಲು ಬದಲು ಆಗದಂತೆ
ನಡೆವರಿವರು ಇಂದಿಗೂ
೨
ನಾನು ಎಲ್ಲಿ ನಡೆದರಲ್ಲಿಗೆ
ನನ್ನ ಜೊತೆಯಲಿ ಬರುವನು
ಕತ್ತಲಲ್ಲಿ ಕಾಣದಂತೆ
ಮಾಯವಾಗಿ ಬಿಡುವನು
ಉತ್ತರಗಳು: ೧. ಚಪ್ಪಲಿ
೨. ನೆರಳು
೩೪
ಒಗಟುಗಳು
೧
ಕಪ್ಪಗಿರವುದು ಕಾಗೆಯಲ್ಲ
ಬೆಳ್ಳಗಿರುವುದು ಬೆಣ್ಣೆಯಲ್ಲ
ನೀರು ಇರುವುದು ಬಾವಿ ಅಲ್ಲ
ಏನು ಏನು ಇದು ಏನು
ಕಂದನೆ ಬಿಡಿಸು ಒಗಟನ್ನು
೨
ಹತ್ತು ತಲೆ ಕೆಂಪುಂಟು
ಆರು ತಲೆ ಕಪ್ಪುಂಟು
ನಾನಾರು ನಾನಾರು
ಎಲೆ ಕಂದ ನೀ ಹೇಳು
ಹೇಳದಿರೆ ತಲೆ ಹೋಳು
ಉತ್ತರಗಲು :೧ ಕಣ್ಣು
೨ ಬೆಂಕಿ ಕಡ್ಡಿ
Subscribe to:
Post Comments (Atom)
No comments:
Post a Comment