Tuesday, February 16, 2010

ಶಿಶು ಪ್ರಾಸಗಳು



ಗಂಧದ ಗೆಳತಿ

ರೇಶಿಮೆ ಅಂಗಿ ಚಿಟ್ಟೆ
ಎಲ್ಲಿಗೆ ಹಾರಿ ಹೊಂಟೆ

ಹೂವಿಂದ್ಹೂವಿಗೆ ಹಾರುವೆ
ಏನು ಹೊತ್ತು ತರುವೆ

ಜೋಡು ಪಕ್ಕ ಬಿಚ್ಚಿ
ರಸ ಹೀರತಿ ಚುಚ್ಚಿ

ಗಂಧದ ಗೆಳತಿ ಬಾ ಬಾ
ಚಂದದ ಅಂಗಿ ತಾ ತಾ

ರೇಶಿಮೆ ಅಂಗಿ ಚಿಟ್ಟೆ
ಎಲ್ಲಿಗೆ ಹಾರಿ ಹೊಂಟೆ
































ಸವಿಗಾರ

ರಾಮಾ ರಾಮಾ ರಾಮಾ
ನಮ್ಮ ಗಿಣಿ ರಾಮಾ

ಹಚ್ಚ ಹಸಿರು ಪುಚ್ಚ
ಅಚ್ಚ ಕೆಂಪು ಚುಂಚ

ಹಣ್ಣು ತಿನ್ನುವ ಸವಿಗಾರ
ಮಾತಿನ ಮಲ್ಲ ಬಹದೂರ

ಅರಗಿಣಿ ಅಂತ ಅಂತಾರ
ಪಂಜರದಾಗ ಹಾಕ್ಯಾರ

ರಾಮಾ ರಾಮಾ ರಾಮಾ
ನಮ್ಮ ಗಿಣಿ ರಾಮಾ






























ಸರದಾರ



ನವಿಲೆ ನವಿಲೆ ನವಿಲೆ
ಗುಡು ಗಡು ಮುತ್ತ್ಯಾನ ಕರೀಲೆ

ರಂಗು ರಂಗಿನ ಬಣ್ಣ
ಹತ್ತು ಸಾವಿರ ಕಣ್ಣ

ನಾಟ್ಯ ಕಲಿತ ನಟವರ
ಬಣ್ಣದ ಗರಿಯ ಸರದಾರ

ಮುತ್ತಿನ ಕೊಡೆಯ ಚಿತ್ತಾರ
ಹುತ್ತಿನ ಹುಳವೆ ಆಹಾರ

ನವಿಲೆ ನವಿಲೆ ನವಿಲೆ
ಗುಡು ಗುಡು ಮುತ್ಯಾನ ಕರೀಲೆ



























ಸೊಳ್ಳೆ

ಸೊಂಯ್ ಸೊಂಯ್ ಸೊಳ್ಳೆ
ಮೈತುಂಬ ಗುಳ್ಳೆ

ರೊಜ್ಜು ರಾಡಿ ಹೊಲಸು
ಇದ್ದರೆ ನಿನಗೆ ಸೊಗಸು

ಸೂಜಿ ಸೊಂಡಿ ಚುಚ್ಚಿ
ರಕ್ತ ಹೀರತಿ ಗಚ್ಚಿ

ಥಂಡಿ ಥಂಡಿ ಜ್ವರ
ಹಬ್ಬಿಸೂವಂತ ಶೂರ

ಸೊಂಯ್ ಸೊಂಯ್ ಸೊಳ್ಳೆ
ಮೈತುಂಬ ಗುಳ್ಳೆ































ಆಕಳು

ಅಂಬಾ ಅಂಬಾ ಆಕಳು
ಕೊಟ್ಟಿಗೆ ತುಂಬ ಒಕ್ಕಲು

ಉದ್ದ ಕೊಂಬು ಕೊಳಗ
ನೀನು ನಮ್ಮ ಬಳಗ

ಬಿಂದಿಗೆ ತುಂಬ ಹಾಲು
ಕರುವಿಗದರ ಪಾಲು

ನಮ್ಮ ಪುಣ್ಯ ಕೋಟಿ
ಯಾರು ನಿನಗೆ ಸಾಟಿ

ಅಂಬಾ ಅಂಬಾ ಆಕಳು
ಕೊಟ್ಟಿಗೆ ತುಂಬ ಒಕ್ಕಲು






























ಗೂ ಗೂ ಗೂಗಿ

ಗೂ ಗೂ ಗೂ ಗೂಗಿ
ಹೆದರಸತಿ ಏನು ಕೂಗಿ

ಮಿಂಚುವ ಹಳದಿ ಕಣ್ಣ
ತಿಳಿಯ ಕೆಂಪು ಬಣ್ಣ

ಬಾವುಗ ಬೆಕ್ಕಿನ ರೂಪ
ಹುಳ ತಿಂತಿ ಗಪ ಗಪ

ಹಗಲಿ ಗಿಡದಲಿ ಕೂತು
ರಾತ್ರಿಯೆಲ್ಲ ಗಸ್ತು

ಗೂ ಗೂ ಗೂ ಗೂಗಿ
ಹೆದರಸತಿ ಏನು ಕೂಗಿ






























ಗುಬ್ಬಿ ಗೂಡು

ಗುಬ್ಬಿ ಗುಬ್ಬಿ ಗೂಡು ಕಟ್ಟಿ
ಅದರಾಗೆರಡು ತತ್ತಿ ಇಟ್ಟಿ

ದಿನವೂ ತಪ್ಪದ ಕಾವು ಕೊಟ್ಟಿ
ಜೋಡ ಮರಿಗಳ ಸಾಕಿಬಿಟ್ಟಿ

ಈಟ ಈಟ ಗುಟ್ಟಿ ಕೊಟ್ಟಿ
ಹಾರು ಆಟ ಕಲಿಸಿಬಿಟ್ಟಿ

ನಮ್ಮ ಮನೆಯಲಿ ಸೇರಿಬಿಟ್ಟಿ
ನನ್ನ ನಿನ್ನ ಗೆಳೆತನ ಗಟ್ಟಿ

ಗುಬ್ಬಿ ಗುಬ್ಬಿ ಗೂಡು ಕಟ್ಟಿ
ಅದರಾಗೆರಡು ತತ್ತಿ ಇಟ್ಟಿ































ಬೆಳ್ಳಿ ಚುಕ್ಕಿ

ಬಿಳಿಯ ಬೆಳ್ಳಕ್ಕೀ
ಮಿನುಗೊ ಬೆಳ್ಳಿ ಚುಕ್ಕಿ

ಬೆಳ್ಳ ಬೆಳ್ಳನೆ ಬಣ್ಣ
ಯಾರ ಬಳದಾರಣ್ಣ

ಕೊಕ್ಕು ಚೊಕ್ಕ ಚಿನ್ನ
ಕ್ಯಾದಗಿ ಎಸಳೇನಣ್ಣ

ನನಗೂ ರೆಕ್ಕೆ ಹಚ್ಚು
ಚಂದದ ಪುಚ್ಚ ಚುಚ್ಚು

ಬಿಳಿಯ ಬೆಳ್ಳಕ್ಕಿ
ಮಿನುಗೊ ಬೆಳ್ಳಿ ಚುಕ್ಕಿ

























ಕೋಗಿಲೆ

ಕುಹೂ ಕುಹೂ ಕೋಗಿಲೆ
ನಿಮ್ಮ ಅವ್ವನ್ನ ಕರೀಲೆ

ಹೊಳೆವ ಕಪ್ಪು ಬಣ್ಣ
ಮಾಟ ಎಂಥ ಚೆನ್ನ

ಚೈತ್ರ ಬಂತು ನೋಡು
ಕುಹೂ ಕುಹೂ ಹಾಡು

ಅಳಬ್ಯಾಡ ನೀ ಪರಪುಟ್ಟ
ಬಾ ನಮ್ಮ ಸಂಗಾಟ

ಕುಹೂ ಕುಹೂ ಕೋಗಿಲೆ
ನಿಮ್ಮ ಅವ್ವನ್ನ ಕರೀಲೆ





























೧೦

ಕಾಗಿ

ಕಾ ಕಾ ಕಾ ಕಾಗಿ
ಬೀಗರ ಕರೀತಿ ಕೂಗಿ

ಕರಿಯ ಡಾಂಬರ ಬಣ್ಣ
ಆದರೂ ಮಿಂಚುವದಣ್ಣ

ಅಗಳು ಕಂಡರೆ ಚೀರಿ
ಬಳಗವೆಲ್ಲ ಸೇರಿ

ಬೇವಿನ ಗಿಡಕೆ ಹಾರಿ
ಮಾಳಿಗೆ ಕುಂಬಿ ಏರಿ

ಕಾ ಕಾ ಕಾ ಕಾಗಿ
ಬೀಗರ ಕರೀತಿ ಕೂಗಿ


























೧೧

ಕೋಳಿ

ಕೂ ಕೂ ಕೂ ಕೋಳಿ
ಬೆಳಗಾಯಿತು ಏಳಿ

ದಿನವೂ ಬೆಳ್ಳಿಯ ತತ್ತಿ
ಅದರಲಿ ತುಂಬಿದೆ ಶಕ್ತಿ

ಕರಿ ಬಿಳಿ ಕೆಂದ ಬಣ್ಣ
ಬಡವರ ಮನೆಯ ಚಿನ್ನ

ಕು ಕು ಕು ಕುಕ್ಕಿ
ಕಾಳ ತಿಂತಿ ಹೆಕ್ಕಿ

ಕೂ ಕೂ ಕೂ ಕೋಳಿ
ಬೆಳಗಾಯಿತು ಏಳಿ





























೧೨

ಗುಬ್ಬಿ

ಚಿಂವ್ ಚಿಂವ್ ಗುಬ್ಬಿ
ಏನು ಹೇಳಲಿ ಸುಬ್ಬಿ

ಕಾಂಕ್ರೆಟ್ ಕಾಡಿನಲ್ಲಿ
ಗೂಡ ಕಟ್ಟತಿ ಎಲ್ಲಿ

ಜೋಡಿ ಮರಿಗಳ ಸಾಕಿ
ಮಾಡತಿ ಹೆಂಗ ಜೋಕಿ

ಕಾಳು ಕಡಿಗಳ ಹೆಕ್ಕಿ
ತಿನ್ನಲಾಕಿಲ್ಲ ಕುಕ್ಕಿ

ಚಿಂವ್ ಚಿಂವ್ ಗುಬ್ಬಿ
ಏನು ಹೇಳಲಿ ಸುಬ್ಬಿ





























೧೩

ಮಂಗ

ಗೂಕ್ ಗೂಕ್ ಮಂಗ
ಲಾಗಾ ಹಾಕೋದ್ ಹೆಂಗ

ರಾಮನ ಸೇವೆ ಬಂಟ
ಲಂಕೆಗೆ ಹಾರಿ ಹೊಂಟ

ಕೊಡುವೆ ಹಣ್ಣು ಹಂಪಲ
ಮಾಡಬೇಡ ಗದ್ದಲ

ಕೊಡೊ ನಿನ್ನ ಬಾಲ
ಒಂದೆರಡ ದಿನಕ ಸಾಲ

ಗೂಕ್ ಗೂಕ್ ಮಂಗ
ಲಾಗಾ ಹಾಕೋದ್ ಹೆಂಗ




























೧೪

ಮಳೆರಾಯ

ಹೊಯ್ಯೋ ಹೊಯ್ಯೋ ಮಳೆರಾಯ
ಇಷ್ಟೇಕ ಕಾಡತಿ ದಮ್ಮಯ್ಯ

ತಟ್ಟಂತ ನೆಲಕ್ಕ ಸುರಿದಿಲ್ಲ
ಸಿಟ್ಟೇನ್ ನಿನಗ ನಮ್ಮ್ಯ್ಮಾಲ

ಸುಣ್ಣ ಕೊಡುವೆ ಸುರಿಯಪ್ಪ
ಬಣ್ಣ ಕೊಡುವೆ ಬಾರಪ್ಪ

ಕಳ್ಳೇ ಮಳ್ಳೇ ಆಡಲಾಕ
ಕೈ ಕೈ ಹಿಡಿದು ಕುಣಿಲಾಕ

ಹೊಯ್ಯೇ ಹೊಯ್ಯೋ ಮಳೆರಾಯ
ಇಷ್ಟೇಕೆ ಕಾಡತಿ ದಮ್ಮಯ್ಯ




























೧೫

ಬಿಸ್ಕಿಟು

ದುಂಡನೆ ಮಾರಿ
ಬಿಸ್ಕಿಟು
ಪುಟ್ಟ ಪಾಪ
ತಿಂತಿತ್ತು

ಪಟ್ಟಂತ ಕೈ
ಜಾರಿ ಹೋಯ್ತು
ಮುಗಿಲ ಮೇಲೆ
ತೇಲೋಯ್ತು

[ಉತ್ತರ : ಚಂದಿರ}































೧೬

ಬೇಸಿಗೆ

ಬಂತು ಬಂತು ಬೇಸಿಗೆ
ಉಸಿರು ಕಟ್ಟಿತು ಗಾಳಿಗೆ

ನೀರು ನೀರು ಎಂದು ನೀರನು
ಬಾಯಿ ಬಾಯಿ ಬಿಡಿಸುತ್ತ

ಬಂತು ಬಂತು ಬೇಸಿಗೆ
ಚಾಚಿ ಬೆಂಕಿ ನಾಲಿಗೆ

ಗಾಳಿ ಗಾಳಿ ಎಂದು ಗಾಳಿಗೆ
ಗೋಳು ಗೋಳನು ಹೊಯ್ಸುತ್ತ

ಬಂತು ಬಂತು ಬೇಸಿಗೆ
ಉಸಿರು ಕಟ್ಟಿತು ಗಾಳಿಗೆ




























೧೭

ಲೆಫ್ಟು ರೈಟು

ಲೆಫ್ಟು ರೈಟು ಸೈನ್ಯ ಬಂತು
ಡ್ರಿಲ್ ಮಾಡುತ್ತ
ಹ್ಯಾಟು ಬೂಟು ಹಾಕಿಕೊಂಡು
ಸಲೂಟ್ ಮಾಡುತ್ತ

ಡಂಡಂ ಡಂಡಂ ಡಂಡಂ ಎಂದು
ಡೋಲು ಬಾರಿಸುತ್ತ
ತುತು ತುತು ತುತು ತು
ತ್ತೂರಿ ಊದುತ

ಹಲವು ವಾದ್ಯದಲ್ಲಿ ರಾಷ್ಟ್ರ
ಗೀತೆ ನುಡಿಸುತ್ತ
ಧ್ವಜಕೆ ನಮಿಸಿ ದೇಶಕಾಗಿ
ಸೇವೆ ಮಾಡುತ




























೧೮

ಕರಡಿ ಮರಿ

ಕರಡಿ ಮರಿಯು
ಕಾಡಿನೊಳಗೆ ವಾಸ ಮಾಡಿತ್ತು
ಕಿತ್ತಳೆ ಹಣ್ಣು
ಕೀಳಲೆಂದು ಹೊಂಚು ಹಾಕಿತ್ತು

ಕುಳಿತುಕೊಂಡು
ಕೂಗಿ ಕೂಗಿ ಬಳಗ ಕರೆದಿತ್ತು
ಕೆಳೆಯ ಗುಂಪು
ಕೇಕೆ ಹಾಕಿ ಓಡಿ ಬಂದಿತ್ತು


ಕೈಯಲೊಂದು
ಕೊಡಲಿ ಹಿಡಿದು ಗಿಡವ ಹತ್ತಿತ್ತು
ಕೋಲಿನಿಂದ
ಕೌಲಿ ಮುರಿದು ಹಣ್ಣ ತಿಂದಿತ್ತು

ಕಂದ ಕೇಳಿ
ಕಕಾ ಬಳ್ಳಿ ಕಲಿತು ಕೊಂಡಿತು
























೧೯

ನಾಗಪ್ಪ

ಬುಸ್ ಬುಸ್ ಬುಸ್ ಬುಸುಗುಡು ನಾಗ
ಹೊಟ್ಟಿ ಹೊಸಿತಿ ಯಾಕಪ್ಪ
ಜೋಡೆಳೆ ನಾಲಿಗೆ ಇದ್ದರೂ ನೀನು
ಕಾಲೆ ಇಲ್ಲದ ಹೆಳವಪ್ಪ

ಇರುವೆ ಕಟ್ಟಿದ ಹುತ್ತಿನ ಮನೆಯಲಿ
ವಾಸ ಮಾಡತಿ ಯಾಕಪ್ಪ
ಪುಂಗಿಯ ಊದಲು ಹೆಡೆಯನು ಬಿಚ್ಚಿ
ಮೈ ಮರೆಯುವ ಹುಚ್ಚಪ್ಪ

ಹೆದರಲು ಬೇಡ ಹೆದರಿಸ ಬೇಡ
ನಮ್ಮ ಗೆಳೆಯ ನೀನಪ್ಪ
ಬಟ್ಟಲು ತುಂಬ ಹಾಲನು ಕೊಡುವೆ
ಕುಡಿದು ಹೋಗಲು ಬಾರಪ್ಪ




























೨೦

ಹಸಿರೇ ಹಸಿರು

ಒಂದು ಎರಡು ಮೂರು
ನೆಲದಲಿ ಬೀಜ ಊರು

ಮೂರು ನಾಲ್ಕು ಐದು
ಬಾವಿ ನೀರನು ಸೇದು

ಐದು ಆರು ಏಳು
ಬಣ್ಣದ ಹೂವಿನ ಎಸಳು

ಏಳು ಎಂಟು ಒಂಬತ್ತು
ಗಿಡದಲಿ ಹಣ್ಣು ತುಂಬಿತ್ತು

ಒಂಬತ್ತು ಹತ್ತು ಹನ್ನೊಂದು
ಹಸಿರೇ ಹಸಿರು ಎಂದೆಂದು




























೨೧

ಪೆದ್ದ

ಅರಳೆ ಕೂದಲ
ಮೋಟು ಬಾಲದ
ಪೆದ್ದನು ಈತನು ನೋಡಣ್ಣ

ಥಂಡಿಯ ತಡೆಯಲು
ಕಂಬಳಿ ನೇಯಲು
ಈತನ ಕೂದಲು ಬೇಕಣ್ಣ

ನೆಲದಲಿ ಮುಖವನು
ಇಟ್ಟರೆ ಸಾಕು
ಮೇಯುವದಷ್ಟೇ ಗೊತ್ತಣ್ಣ

ಒಂದರ ಹಿಂದೆ
ಇನ್ನೊಂದಾಗಿ
ಕೂಗುತ ನಡೆವನು ಕೇಳಣ್ಣ



























೨೨

ತುಂಟಿ

ನನ್ನ ತಂಗಿ ತುಂಟಿಯು
ಬಹಳ ಜಗಳಗಂಟಿಯು

ಸೊನ್ನೆಗೆ ಸೊನ್ನೆಯ
ಸಾಲನು ಸೇರಿಸಿ
ಮುತ್ತಿನ ಸರವನು ಮಾಡಿದಳು
ಮುತ್ತಿನಂತಹ ಅಕ್ಷರ ನೋಡು
ಎನ್ನುತ ಸರಸದಿ ತೋರಿದಳು

ಕೊಂಬು ಇಲ್ಲದ
ಸೊನ್ನೆಯ ಸಾಲನು
ಹರುಷದಿ ಅಮ್ಮನು ನೋಡಿದಳು
ತಂಗಿ ಜಾಣ್ಮೆಗೆ ಮೆಚ್ಚಿ ಅಮ್ಮ
ಮುತ್ತನೊಂದ ನೀಡಿದಳು














೨೩

ಕರಿ ಬೆಕ್ಕು

ಕರಿಯ ಬೆಕ್ಕು
ಕಾಲು ಚಾಚಿ ಮಲಗಿಕೊಂಡಿತ್ತು
ಕಿರಿಚು ಇಲಿಯು
ಕೀರಿ ಕೀರಿ ಹಾಡು ಹಾಡಿತ್ತು

ಕುರುಡು ಬೆಕ್ಕು
ಕೂಗಿದಾಗ ಎಚ್ಚರಾಯಿತು
ಕೆರಳು ದನಿಯ
ಕೇಳಿ ಇಲಿಯು ಓಡಿ ಹೋಯಿತು

ಕೈಯ ಕಡಬು
ಕೊರಳ ಚಕ್ಲಿ ಜಾರಿ ಬಿದ್ದಿತು
ಕೋಟಿ ತುಂಡು
ಕೌದಿಯಲ್ಲಿ ನುಸುಳಿ ಕೊಂಡಿತು

ಕಂಡ ಇಲಿಯು
ಕಾಣದಂತೆ ಮಾಯವಾಯಿತು
ಕಕಾ ಬಳ್ಳಿ
ಕಲಿತ ಕಂದ ಹರುಷ ತಾಳಿತು

























೨೪

ತುತ್ತು

ಒಂದು ಒಂದು ಎರಡು
ಮಣ್ಣು ಹದ ಮಾಡು

ಎರಡು ಎರಡು ನಾಲ್ಕು
ಬೀಜ ಊರ ಬೇಕು

ಮೂರು ಮೂರು ಆರು
ನೆಲದಲಿ ಮೊಳಕೆ ಚಿಗುರು

ನಾಲ್ಕು ನಾಲ್ಕು ಎಂಟು
ಮೆಂತೆ ಪಲ್ಲೆದ ಗಂಟು

ಐದು ಐದು ಹತ್ತು
ರೊಟ್ಟಿಗೊಂದು ತುತ್ತು































೨೫

ಗಮ್ಮತ್ತು


ಶಾಲೆಗೆ ಸೂಟಿ ಇವತ್ತು
ಅಡುವ ಆಟಕೆ ಗಮ್ಮತ್ತು
ಪಾಠಲೆಕ್ಕ ತಲೆಚಿಟ್ಟು
ಪುರಸೊತ್ತಿಲ್ಲ ಒಂದಿಷ್ಟು

ಬಣ್ಣದ ತುತ್ತೂರಿ ಹಳೆದಾತು
ಕ್ರಿಕೆಟ್ ಬ್ಯಾಟು ಮುರದೋತು
ಹೀ ಮ್ಯಾನು ರಾಬೋಟು
ಟಿ ವಿ ನೋಡುವೆ ತುಸುಹೊತ್ತು

ವಾರಕ್ಕೊಂದೆ ರವಿವಾರ
ಯಾಕ ಹಿಂಗ ಮಾಡ್ಯಾರ
ಶಾಲೆಯ ಕಾಟ ತಪ್ಪಿಸಿ
ಇರಬಾರದ್ಯಾಕ ನಾಲ್ಕಾರ




























೨೬

ಮಳೆ

ಕಡಲ ನೀರು ಕಾದು ಕಾದು
ಮೋಡವಾಯಿತು
ಕರಿಯ ಮೋಡ ಕೂಡಿ ಕೂಡಿ
ಮಳೆಯ ಸುರಿಸಿತು

ಹಳ್ಳ ಕೊಳ್ಳ ತುಂಬಿ ನೀರು
ನೀರೇ ಹರಿಯಿತು
ನೆಲವು ಆಗ ಹಚ್ಚ ಹಸಿರು
ಸೀರೆ ತೊಟ್ಟಿತು

ಗಿಡದ ತುಂಬ ಬಣ್ಣ ಚೆಲ್ಲಿ
ಹೂವು ಅರಳಿತು
ಅಲ್ಲಿ ಇಲ್ಲಿ ಎಲ್ಲ ಕಡೆಗೆ
ಕಂಪು ಹರಡಿತು






















೨೭

ಪುಟ್ಟನ ಪ್ರಶ್ನೆ -೧

ಪುಟ್ಟ- ಸೂರ್‍ಯ ನೀನು ಯಾವತ್ತು
ಬೆಂಕಿ ಉಗಳತಿ ಯಾಕಿಂತು

ಸೂರ್‍ಯ- ನಾನು ಉರಿದರೆ ಏನಾಯ್ತು
ಬೆಳಕನು ಕೊಡುವೆ ಸಾಕಷ್ಟು

ಪುಟ್ಟ- ರಾತ್ರಿಯಾದರೆ ಬೇಸತ್ತು
ಮಲಗುವೆ ಏನು ತುಸು ಹೊತ್ತು

ಸೂರ್‍ಯ- ನಿದ್ರೆ ಬಾರದು ಎನಗೆಷ್ಟು
ಆಲಸಿಯಲ್ಲ ನಿಮ್ಮಷ್ಟು













































೨೮

ಪುಟ್ಟನ ಪ್ರಶ್ನೆ-೨

ಪುಟ್ಟ _ ಚಂದಿರ ನಿನಗೆ ತಂಪುಂಟು
ಹಗಲಲಿ ಯಾರ ಭಯವುಂಟು
ಬೆಳಕೆ ಇಲ್ಲ ಎಳ್ಳಷ್ಟು
ಏನಿದು ಹೇಳು ನಿನಗುಟ್ಟು
ಚಂದಿರ _ ತಿರುಗುವೆ ಭೂಮಿಯ ಮೈಸುತ್ತು
ಸ್ವಂತ ಬೆಳಕು ಎಲ್ಲಿ ಬಂತು
ಸೂರ್‍ಯನ ಬೆಳಕನೆ ನಾ ಹೊತ್ತು
ಬಿಂಬಿಸಿ ತೋರುವೆ ತಂಪೊತ್ತು



೩೦

ಆಟ ಆಡು

ಆಡು ಆಡು
ಆಟ ಆಡು
ಆಡು ಆಡು
ಕ್ರಿಕೆಟ್ ಆಡು

ಮಾಡು ಮಾಡು
ಬೌಲ್ ಮಾಡು
ಓಡಿ ಬಂದು ಫಾಸ್ಟ ಮಾಡು

ಹೊಡಿ ಹೊಡಿ
ಜೋರ ಹೊಡಿ
ಫೀಲ್ಡರ್ ತಪ್ಪಿಸಿ ಬಾಂಡರಿ ಹೊಡಿ

ಬಾರಿಸು ಬಾರಿಸು
ಎತ್ತಿ ಬಾರಿಸು
ಗೆರೆ ದಾಟಿ ಸಿಕ್ಸರ್ ಬಾರಿಸು

ಹಿಡಿ ಹಿಡಿ
ಕ್ಯಾಚ್ ಹಿಡಿ
ಫಸ್ಟ್ ಬಾಲ್‌ಗೆ ವಿಕೆಟ್ ಪಡಿ

ಹೊಡಿ ಹೊಡಿ
ಚಪ್ಪಳಿ ಹೊಡಿ
ಆಟ ಆಡಿ ಖುಷಿ ಪೆಡಿ
















೩೧

ಡೊಳ್ಳು ಹೊಟ್ಟೆ ಗಣಪ

ಗಣಪ ಬಂದ ಗಣಪ
ಚವತಿ ಚಲುವ ಗಣಪ

ಡೊಳ್ಳು ಹೊಟ್ಟೆ
ಕುಳ್ಳ ಮೂರ್ತಿ
ಅಡ್ಡಾ ದಿಡ್ಡಿ ಗಣಪ
ಸುರುಳಿ ಸೊಂಡಿ
ಕೋರೆ ಹಲ್ಲು
ಮರದ ಕಿವಿಯ ಟೊಣಪ

ಕರಿದ ಕಡಬು
ಹುರಿದ ಲಾಡು
ತಿಂಡಿ ಪೋತ ಗಣಪ
ತಿಂದು ತಿಂದು
ಹೊಟ್ಟೆ ಒಡದರು
ಆಸೆ ಬಿಡದ ಟೊಣಪ

ತಂಟೆ ತರಲೆ
ತುಂಟ ಜಾಣ್ಮೆ
ವಿದ್ಯಾ ಬುದ್ದಿ ಗಣಪ
ವರುಷ ವರುಷ
ಚವತಿ ದಿವಸ
ಹಾಜರಾಗುವ ಟೊಣಪ



















೩೧

ಪುಟ್ಟಿ ಬುಟ್ಟಿ


ನಸುಕಲಿ ಎದ್ದು
ಕವನ ಬರೆಯಲು
ಕುಳಿತಳು ನಮ್ಮ ಪುಟ್ಟಿ

ಬರದೇ ಬರೆದಳು
ಹರಿದೇ ಹರಿದಳು
ತುಂಬಿತು ಕಸದ ಪುಟ್ಟಿ






























೩೨


ಪುಟ್ಟ ಕವಿ


ಕೈಯಲಿ ಕುಂಚ
ಹಿಡಿದು ಪುಟ್ಟ
ಬರೆಯಲು ಕುಳಿತ ಚಿತ್ರ

ತಿದ್ದಿ ತೀಡಿ
ಬರೆದು ಬಿಟ್ಟ
ಗಾಂಧಿದೊಂದು ಚಿತ್ರ

ಉದ್ದನೆ ಮೂಗು
ದುಂಡ ಚಾಳೀಸು
ಕೈಯಲೊಂದು ಬಡಿಗೆ

ಬತ್ತಲೆ ಮೈಗೆ
ತುಂಡು ಪಂಚೆ
ಹಾಸು ಬೀಸಿನ ನಡಿಗೆ

ಬೋಳು ತಲೆಗೆ
ಅಂಟಿಕೊಂಡಿದೆ
ಆನೆಯಂಥ ಕಿವಿಯು

ಚಿತ್ರ ಕವಿತೆ
ಬರೆದ ಪುಟ್ಟ
ಆಗೆಬಿಟ್ಟ ಕವಿಯು
















೩೩

ಒಗಟುಗಳು



ನನ್ನ ಗೆಳೆಯರೆಂಥ ಜೋಡಿ
ಅಗಲಲಾರರು ಎಂದಿಗೂ

ಅದಲು ಬದಲು ಆಗದಂತೆ
ನಡೆವರಿವರು ಇಂದಿಗೂ



ನಾನು ಎಲ್ಲಿ ನಡೆದರಲ್ಲಿಗೆ
ನನ್ನ ಜೊತೆಯಲಿ ಬರುವನು

ಕತ್ತಲಲ್ಲಿ ಕಾಣದಂತೆ
ಮಾಯವಾಗಿ ಬಿಡುವನು


ಉತ್ತರಗಳು: ೧. ಚಪ್ಪಲಿ
೨. ನೆರಳು






















೩೪

ಒಗಟುಗಳು



ಕಪ್ಪಗಿರವುದು ಕಾಗೆಯಲ್ಲ
ಬೆಳ್ಳಗಿರುವುದು ಬೆಣ್ಣೆಯಲ್ಲ
ನೀರು ಇರುವುದು ಬಾವಿ ಅಲ್ಲ
ಏನು ಏನು ಇದು ಏನು
ಕಂದನೆ ಬಿಡಿಸು ಒಗಟನ್ನು



ಹತ್ತು ತಲೆ ಕೆಂಪುಂಟು
ಆರು ತಲೆ ಕಪ್ಪುಂಟು
ನಾನಾರು ನಾನಾರು
ಎಲೆ ಕಂದ ನೀ ಹೇಳು
ಹೇಳದಿರೆ ತಲೆ ಹೋಳು


ಉತ್ತರಗಲು :೧ ಕಣ್ಣು
೨ ಬೆಂಕಿ ಕಡ್ಡಿ

ಮುತ್ತುಗಳು

. ನೀರ ಮುತ್ತುಗಳು

೧.

ನೀರೆ,
ಧೋ ಧೋ ಎಂದು
ಸುರಿವ
ನಿನ್ನ
ಒಲುಮೆ ಮಳೆಗೆ
ತುಂಬಿದ
ನನ್ನ
ಭಾವ ಕೋಡಿ
ಭೋರ್ಗರೆದು
ಹೊರಚೆಲ್ಲಿದ
ನೀರ ಮುತ್ತುಗಳು

ನನ್ನ-ಕವನಗಳು

೨.

ಬಯಕೆ ಕಾಣಿಕೆ

ನಲ್ಲೆ,
ನಿನ್ನ ಒಲುಮೆ
ಮತ್ತಿನಲೆ
ಮಾಡಿದ

ನೀರ-ಮತ್ತುಗಳ
ನಿನಗೇ
ಅರ್ಪಿಸಬೇಕೆಂಬುದು
ನನ್ನ ಬಯಕೆ
ಅಲ್ಲೆ,
ಬೇರೇನಿದೆ
ನನ್ಮಲ್ಲಿ ಕೊಡಲು
ಕಾಣಿಕೆ |










ಇನಿಯಳೆ
ನಿನ್ನ
ನೆನಪ-ಗೂಡು
ಒಡೆದು
ತಟಕಿಕ್ಕಲಿರುವ
ಜೇನ-ಹನಿಗಳು

ನನ್ನ ಕವನಗಳು




ಪ್ರಿಯಳೆ,
ಬಿಚ್ಚಿ ಅರಳಿನಿಂತ
ನಿನ್ನ
ನೆನಪ-ಹೂವಿನ
ಪರಿಮಳಕೆ
ಮೋಹಿಸಿಬಂದ
ತುಂಬಿಗಳು

ನನ್ನ-ಕವನಗಳು |




ನೀರೆ
ವಿರಹದ
ಆ ತುದಿಯಿಂದ
ಬೌಲ್ ಮಾಡಿ
ಮೊದಲ ಓವರಿನಲ್ಲಿಯೇ
ನೀ
ಪಡೆದ ವಿಕೆಟ್ಟುಗಳು
ಈ ನನ್ನ
ಕವನಗಳು

ನಲ್ಲೆ
ನಿನ್ನ
ಒಲುಮೆ ಕ್ರಿಕೆಟ್ಟಿನ
ಮೊದಲ ಇನ್ನಿಂಗ್ಸಲ್ಲೇ
ನಾ
ಬಾರಿಸಿದ
ಬಾಂಡರಿ-ಸಿಕ್ಸರುಗಳು
ಈ ನನ್ನ ಪದ್ಯಗಳು

ಗೆಳತಿ
ದಾಂಪತ್ಯದಗಲಿಕೆಯ
ನೋವಿನಲಿ
ಅನುಭವದ
ಮೊದಲ ಪ್ರೇಮ ಪಾಠದಲಿ
ಕಲಿತ
ಅಕ್ಕರಗಳು

ನನ್ನ
ಪದ್ಯಗಳು


ನಲ್ಲೆ
ಬಾಳ ಸಂಪುಟದ
ದಾಂಪತ್ಯ-ಅಧ್ಯಾಯದ
ನೆನಪ ಪುಟಗಳು

ನನ್ನ ಪುಟ್ಟ-ಪುಟ್ಟ
ಪದ್ಯಗಳು


ನೀರೆ
ನಿನ್ನ ನೆನಪ-ಮೋಡಕೆ
ಎದೆಯ
ತಂಪು ತಾಕೆ
ಉದುರಿದ

ನೀರ ಮುತ್ತುಗಳು
ನಿನಗೆ ಕಾಣಿಕೆ
ಮನ್ನಿಸಲಾರೆಯ
ನಲ್ಲನ ಈ ಕೋರಿಕೆ

೧೦
ಗೆಳತಿ
ಹಗಲಿರುಳೂ
ನನ್ನ ಕಾಡಿ
ಕಾಗದದ ತುಂಬೆಲ್ಲ
ಮೂಡಿ ಬರುವ

ಕವನಗಳ ಹಿಂದೆ
ಆಡುವುದು
ನಿನ್ನದೇ ಮೋಡಿ
ಹೇಳು ಪ್ರಿಯೆ
ಅವಕೇಕೆ ಹಾಕಲಿ ಬೇಡಿ |
೧೧

ಹುಚ್ಚ |

ಮಾತಿಗೆ ನಿಲುಕದ
ಮೌನದಾಚೆಯ
ಮಧುರ ಕ್ಷಣಗಳನು
ಅಕ್ಷರ-ಶಬ್ದ-ವಾಕ್ಯಗಳಲಿ
ಸೆರೆಗ್ಯಯಲೆಳಸುವ
ಕವಿ
ಎಂಥ ಹುಚ್ಚ |

೧೨

ವ್ಯತ್ಯಾಸ

ಕ್ಷ-ಕಿರಣವೇ
ನೀ
ಕಾಯ ಕವಚ ವೇದಿ
ನಲ್ಲೆ
ನಿನ್ನ-ಅಕ್ಷಿ
ಹೃದಯ ಸಂವೇದಿ|

೧೩

ಗೊತ್ತೆ ?

ನಲ್ಲೆ,
ಕಾಯ ಕಾಂತಾರವ
ಭೇದಿಸಿ
ಭಾವ ಬಯಲನಾಕ್ರಮಿಸಿ
ಗುಪಿತ ಅಂತರಾಳವ
ಶೋಧಿಸಿ-
ಬಿಡುವ ನಿನ್ನ ಬಗೆಗಣ್ಣ
ಅದ್ಭುತ ಶಕ್ತಿ
ನಿನಗೆ ಗೊತ್ತೆ ?







೧೪

ನೀರೆ,
ನಿನ್ನ
ನೆನಪ-ಪಕ್ಕ
ಗರಿಗೆದರಿ
ಬರಬೇಕಂದಿದ್ದೇನೆ
ನಿನ್ನಲ್ಲಿಗೆ ಹಾರಿ
ನನಗೀಗ
ಇರುವುದು
ಒಂದೇ ಒಂದು
ಈ ಕಲ್ಪನೆ ದಾರಿ

೧೫
ನೀರೆ,
ಧುಮ್ಮಿಕ್ಕುವ
ನನ್ನ
ಭಾವ ಬುಗ್ಗೆಗಳಿಗೆ
ನಿನ್ನ
ನೆನಪೇ
ಮೂಲಸೆಲೆ
ಅನುಪಮ
ಕಲೆಯ ನೆಲೆ


೧೫
ಮಯೂರ ಚಿತ್ತಾರ

ನಿನ್ನ
ನೆನಪ ಮುಂಗಾರು ಮಳೆಗೆ
ನಲಿದು
ನರ್ತಿಸುವ ನನ್ನ
ಮನಮಯೂರ
ತೆರೆದು
ನೂರು ನೂರು
ಬಣ್ಣಗಳ ಕಣ್ಣುಗಳ
ಚಿತ್ತಾರ







೧೬
ಚೋದ್ಯ


ನಿನ್ನ ನೆನಪ ಆಗಸದಿ
ಮಿನುಗುತಿವೆ ನಕ್ಷತ್ರಗಳು
ಲೆಕ್ಕಿಸದೆ
ಹಗಲು ಇರುಳು
ಇದ ಕಂಡ ಸೂರ್‍ಯ
ಕಚ್ಚಿದ ಬೆರಳು

೧೭

ಒಗಟು

ನಲ್ಲೆ,
ನಿನ್ನ ನೆನಪ ಅಂಗಳದಿ
ಆಡಿ-ಓಡಿ
ಎದ್ದು-ಬಿದ್ದು
ಹೊರಳಾಡಿದರೂ
ದಣಿವಿಲ್ಲ
ಯಾಕಡಂಬುದೇ
ತಿಳಿದಿಲ್ಲ
ಹೊಳೆದಿಲ್ಲ

೧೮

ರಾಗರತಿ
ಗೆಳತಿ,
ಭಾವ ಮೂಡಣದಿ
ನಿನ್ನ
ನೆನಪ ಸೂರ್‍ಯನ
ಉದಯ
ಬಣ್ಣ ಬಣ್ಣ
ಹೊಂಬಣ್ಣ ಓಕುಳಿ
ಆಕಾಶ ಹೃದಯ
೧೯

ಬೆಳದಿಂಗಳು
ಪ್ರಿಯೆ
ವಿರಹ ಆಗಸದಿ ನಿನ್ನ
ನೆನಪ ಚಂದ್ರ ಮೂಡಲು
ಹೃದಯ ಬವಿಯೆಲ್ಲ
ಹಾಲ್ಗಡಲು
೨೦

ನಿರೀಕ್ಷೆ
ಮೈಯ ಮಾಮರ
ಪಲ್ಲವವ ಹೆಕ್ಕಿ
ಮನ ಕೋಗಿಲೆ ಮಧುರ ಗೀತೆ
ಹಾಡಿದೆ
ಬಯಕೆ ಮಲ್ಲಿಗೆ
ಮರವ ತಬ್ಬಿ
ಹೋವರಳಿಸಿ
ತುಂಬಿಗಾಗಿ
ಕಾದಿದೆ

೨೧
ಮಲ್ಲಿಗೆ
ನಲ್ಲೆ,
ನೀ
ಮೌನ ಮಲ್ಲಿಗೆ
ಸ್ಪರ್ಶ ಕೋಗಿಲೆ
ದೃಶ್ಯ ಶಾಮಲೆ
ಸಿರಿಗಂಧದನುರಾಗ ಮಾಲೆ
೨೨
ವಿಚಿತ್ರ

ಪ್ರೀತಿ‌ಎಂದರೇನು- ಎಂದೆ
ಸಿಹಿ ಎಂದರೇನು- ಎಂದಳು
ಪ್ರಶ್ನೆಗೆ ಉತ್ತರವಿದಲ್ಲ- ಎಂದರೆ
ಪ್ರಶ್ನೆಗೆ ಪ್ರಶ್ನೆಯೇ ಉತ್ತರ-ಎಂದು
ನಗಬೇಕೆ ?

೨೩
ಪಟ
ಗೆಳತಿ ನಿನ್ನ
ನೆನಪ ಪಟಕೆ
ಪ್ರೀತಿ ಸೂತ್ರ ಕಟ್ಟಿ
ಮನ ಬಾಲಂಗೋಸಿ ಹಚ್ಚಿ
ಹೃದಯ ನೂಲ ಬಿಚ್ಚಿ
ಅನುರಾಗದಾಗಸದಲಿ
ಹಾರಬಿಟ್ಟಿರುವೆ
ಬಿರುಗಾಳಿಗೂ
ಅಲುಗದ

ಪಟದ ದಿಟಕೆ
ನಾನೇ ಬೆಚ್ಚಿರುವೆ
೨೪
ಪ್ರತಿಫಲ

ನಲ್ಲೆ,
ನಿನ್ನ ಒಲುಮೆ ಆಗಸ
ಅದೆಷ್ಟು ಬಿತ್ತರ ?
ಒಲುಮೆ ಶಿಖರ
ಅದೆಷ್ಟು ಎತ್ತರ ?
ಒಲುಮೆ ಸರೋವರ
ಅದೆಷ್ಟು ಆಳ ?
ಒಲುಮೆ ಸಾಗರ
ಅದೆಷ್ಟು ಅಪರಂಪಾರ ?

ಬಿತ್ತರಕೆ ಹಾರಿ
ಎತ್ತರಕೆ ಏರಿ
ಆಳಕೆ ಇಳಿದುದಕೆ

ಅಪಂಪಾರಕೆ ಸಾರಿದುದಕೆ ಪ್ರತಿಫಲ ?
ಆ ಸುಖ ವರ್ಣಿಸಲಸದಳ |


೨೫
ಬೇಲಿ

ನಲ್ಲೆ ,
ನಿನ್ನ
ನೆನಪ ಬೀಜ
ಹೃದಯ ಭೂಮಿಯಲಿ
ಕಲ್ಪನೆ ನೀರ
ಕುಡಿದು
ಮಳಕೆಯೊಡೆದು
ಬೆಳೆಯುತಿದೆ
ಬಳಕುತಿದೆ
ಮರೆವು ದನ ನುಗ್ಯಾವೆಂದು
ಮನ ಬೇಲಿಯ ಹಚ್ಚಿ
ಕಣ್ಣ ಕೀಲಿಸಿ
ಕಾಯ ಬೇಕಿದೆ |







೨೬
ಹಸಿರು- ಉಸಿರು

ಗೆಳತಿ,
ನಿನ್ನ
ನೆನಪ ಸಸಿಯ
ಹೃದಯ ಅಂಗಳದಿ
ಮನ ಮಣ್ಣ
ಹದ ಮಾಡಿ
ಒಲುಮೆ ನೀರ ಹೊಯ್ದು
ಮುದವಾಗಿ ಬೆಳೆಸಿರುವೆ
ಈಗ ಹಚ್ಚ ಹಸಿರು
ಅದೇ ನನ್ನ ಉಸಿರು

೨೭

ನಲ್ಲೆ,
ನಿನ್ನ
ನೆನಪ ತೋಟದಿ ಅರಳಿದ
ಅನುರಾಗ ಹೂಗಳಲಿ
ಸೂಸುತಿದೆ ಪರಿಮಳ
ಅದ ಹೀರಿದಷ್ಟೂ
ನನ್ನ ಮನದುಂಬಿಗೆ
ಇನ್ನೂ ಬೇಕೆಂಬ
ಕಳವಳ
ತಳಮಳ |

೨೮
ಚಿಂತೆ

ಗೆಳತಿ,

ನಿನ್ನ
ನೆನಪ ಚಂದ್ರ
ದಿನ ದಿನಕೆ
ಬೆಳೆದರೆ
ಚಿಂತೆ
ಇರಲಿಲ್ಲ ನನಗೆ
ಕ್ಷಣ ಕ್ಷಣಕೂ
ಬೆಳೆವುದು
ಯಾವ ಬಗೆ
ಹೇಳು ಪ್ರಿಯೆ
ಸಹಿಸಲಿ ಹೇಗೆ
ಈ ಬೇಗೆ
೨೯
ನಲ್ಲೆ,
ನಿನ್ನ
ನೆನಪ ಗಾಯದ
ಸುತ್ತ
ನವೆತ ಕೆರೆತ ಹಿತ
ಅದು ಹಚ್ಚಿದಷ್ಟೂ
ಉರಿತ
[ಯಾವುದಿದೆ ಇದಕಿಂತ ಹರಿತ ?]

೩೦
ಅಪ್ಪುಗೆ

ಅವಿನಾಭಾವ
ಸಂಬಂಧದ
ಅದ್ವೈತ
ದೇಹಿಗಳ
ಅನಂತ ಬೆಸುಗೆ

೩೧
ತಿಂಗಳು
ನಲ್ಲೆ,
ವಿರಹ ಕಾರಿರುಳ ಕತ್ತಲೆಯಲಿ
ಬೆಳದಿಂಗಳಿಸುವ ತಿಂಗಳು
ನಿನ್ನ ನೆನಪು
೩೨
ನೆನಪು

ನಲ್ಲೆ,
ವಿರಹ ಮರುಭೂಮಿಯ
ಓಯಾಸಿಸ್
ನಿನ್ನ ನೆನಪು

೩೩
ಬಂಧಿ

ನಲ್ಲೆ,
ನಿನ್ನ
ಬಿಸಿಯುಸಿರಿಗೇಕೆ
ಇಷ್ಟು ಶಕ್ತಿ
ನೀನಲ್ಲಿ
ದೂರ ತವರಲ್ಲಿ ಇದ್ದರೂ ಸಿಕ್ಕಿಲ್ಲ
ನನಗೆ
ಅದರಿಂದ ಮುಕ್ತಿ |


೩೪
ವೈದ್ಯೆ

ನಲ್ಲೆ,
ವಿರಹ ಹೆಬ್ಬಾವು
ಕಚ್ಚಿ ವಿಷ ಏರಿದೆ
ನರನರಕೂ
ನೀ
ಬಂದಲ್ಲದೆ
ವಿಷವಿಳಿಯದಿದು
ಬೇರಾವ
ಗಾರುಡಿಗನ
ಔಷಧಕೂ

೩೫
ಶಾಪವಲ್ಲ
ನಲ್ಲೆ,
ನಿನ್ನ ವಿರಹ
ಧಗೆಯಲಿ
ಬೆಂದ ನನಗೆ
ತಾಳಿಕೋಟಿಯ
ಎಪ್ರಿಲ್- ಬಿಸಿಲು
ತಾಪವಲ್ಲ-ಶಾಪವಲ್ಲ
೩೬

ಗೆಳತಿ,
ನಿನ್ನ
ವಿರಹದುರಿಯಲಿ
ಬೆಂದು
ಉಸಿಡುವ
ನನ್ನ
ಪ್ರತಿಯೊಂದು
ಪದಗಳಿಗೂ
ಈಗ ಶಬ್ದಮೀರಿದ
ಅನುಭವದ ಧ್ವನಿ







೩೭
ವರ್ಷಧಾರೆ

ನಲ್ಲೆ,
ವಿರಹ ಬಿರುಬಿಸಿಲ
ಧಗೆಗೆ ಬೆಂದ
ಹೃದಯ -ಬುವಿಗೆ
ನಿನ್ನ
ಆಗಮನ-ವರ್ಷಧಾರೆ
ಎಲ್ಲೆಲ್ಲೂ
ಹೊಸ ಜೀವಕಳೆಯ
ಸೂರೆ

೩೮
ಜಪ
ನಲ್ಲೆ,
ನೀ
ಸಾಕಿದ ಗಿಳಿ
ಹಗಲಿರರುಳೂ
ಜಪಿಸುತಿದೆ
ನಿನ್ನ ನಾಮ
ರಾಮ ರಾಮಾ
ಎಷ್ಟು ಸಂತೈಸಿದರೂ
ಅದಕಿಲ್ಲ
ವಿರಾಮ
ಅಲ್ಲೆ,
ನೀನೆ ಇಲ್ಲದಿರೆ
ಅದಕೆಲ್ಲಿ
ಸಂಭ್ರಮ |


೩೯

ನಲ್ಲೆ ,
ನಿನ್ನ
ಪ್ರೀತಿ-ಪಂಜರದದಲಿರುವ
ನನ್ನ
ಮನ-ಗಿಳಿಯು
ಬಾಗಿಲ ತೆರೆದರೂ
ಃರಿಹೋಗಬಯಸದು ಏಕೆ |
ಪಾಪ
ಅದನಾರು
ಮಾಡಬೇಕೀಗ ಜೋಕೆ |

೪೦
ನಲ್ಲೆ,
ನೀ ಬಿಗಿದ
ಪ್ರೇಮ ಪಾಶ ಸಡಿಲಗೊಲಿಸಿದಷ್ಟೂ
ಬಿಗಿಯುತಿದೆ
ಮೈ-ಮನ-ಹೃದಯಗಳ
ನಲ್ಲೆ
ಈ ಶಿಕ್ಷೆಯ ನಾನೊಲ್ಲೆ
ಇದಕೆ ಔಷಧಿಯ
ನೀಬಲ್ಲೆ

೪೧

ನಲ್ಲೆ,
ನೀನಿರುವುದು
ದೂರದ ಅಬ್ಬೆಯ-ಕೇರಿ
ಆದರೂ ಕೆಣಕುವೆ
ಕ್ಷಣ ಕ್ಷಣಕೂ
ದಿನದಿನಕೂ
ಕನಸು ಮನಸಲಿ ಸೇರಿ

ರೀ sss
ನೀವಿರುವುದು
ದೂರದ ತಾಳಿಯ ಕೋಟಿ
ಆದರೂ ಆಗುವುದು
ಕ್ಷಣ ಕ್ಷಣಕೂ
ದಿನದಿನಕೂ
ಕನಸು ಮನಸಲಿ ಭೇಟಿ
೪೨
ನನ್ನವಳು
ನಲ್ಲೆ,
ಒಂದು ಮುತ್ತು
ಇದು ನನ್ನ ಬಯಕೆ
ಮಗುವಾದರೂ
ನಿಮಗೆ ಇನ್ನೂ
ನನ್ನದೇ ಬಡಬಡಿಕೆ
ಏನಿದೆಲ್ಲ ಹುಡುಗಾಟಿಕೆ
ಎಂದು
ಹುಸಿ ಮುನಿಸಲಿ
ಬಂದಳು ಸನಿಹಕೆ
ಮೊಗ ಚಾಚಿ
ತುಟಿ ಹಚ್ಚಿದಳು
ಗಲ್ಲಕೆ


೪೩
ನಲ್ಲೆ,
ನಿನ್ನ ಚೆಲುವಿನಲಿ
ನನಗೇಕಿನಿತು ಮೋಹ
ಎನಿತು
ನೋಡಿದರೂ
ಕೂಡಿದರೂ
ತೀರದೀ ದಾಹ

೪೪
ಮುಕ್ತ
ನಲ್ಲೆ,
ನಿನ್ನ-ಒಲವು
ಆಕ್ಟೋಪಸ್
ಹಿಡಿತದಲಿದ್ದರೂ
ನಾ
ಎಲ್ಲ ಬಂಧನ
ಕಳಚಿಕೊಂಡ ಮಕ್ತ

೪೫
ಏಕಾಂತ
ನಲ್ಲ-ನಲ್ಲೆಯರ
ಅಂತರಾಳದ
ಮೂಡಿಬರದ
ಭಾವಗಳನೆಲ್ಲ
ಗೂಢವಾಗಿ
ಗಾಢವಾಗಿ
ನೂರು ನೂರು
ಮಡಿಯಾಗಿ
ಅನುಭವಿಸಲು
ದೊರೆತ
ಅದೃಷ್ಟ-ಸಮಯ
೪೬
ನಲ್ಲೆಗೆ
ಬರೆಯಿರೆಂದಳು
ಹಾಯಿಕು : ನೀ
ಓದಿದೆರೆಷ್ಟುಬೇಕು ?
೪೭
ಬಿಕ್ಕಟ್ಟು
ಸತ್ಯ ಹೇಳುವುದೇ
ಕರಾರು : ಹೇಳಿದಿರೋ
ತಕರಾರು


೪೮
ಎಚ್ಚರ
ದ್ರೌಪತಿಯ ಸೀರೆ
ತೊಟ್ಟ ನೀರೆ
ದುಶ್ಶಾಸನರಿದ್ದಾರೆ |
೪೯
ಬಳಿಯ ಬೆಳ್ಳಕ್ಕಿ
ಸಾಲು : ಹೆಪ್ಪಾಯಿತದೋ
ಕೆನೆಹಾಲು
೫೦
ಒಹೋ ಸುಂದರಿ
ಭೀಮನ ರತಿ
ಆತು ಮಂಗಳಾರತಿ
೫೧
ಗಿಡಕಡಿದರೆ
ಜಗ ಬೋಳು ಬೋಳು
ತಪ್ಪದು ಗೋಳು
೫೨
ಏನೀ ವ್ಯಾಕರಣ
ಹಚ್ಚು ಪಂಡಿತರ
ದುರಾಕ್ರಮನ
೫೪
ದಹಿನೆಂಟು ನಂಗೆ
ವಯೋಮಾನ
ಮಾಡಲು ಮತದಾನ
೫೫
ಚುಟುಕು
ಬರೆಯುವುದು
ಏನು ಮಹಾ
ಇಂಥ ಚುಟುಕು :
ಕುಡಿದಂತೆ
ನೀರು
ಒಂದು ಗುಟುಕು
೫೬
ಪತ್ರಿಕಾ
ಮರಭೂಮಿಯ
ಓಯಾಸಿಸ್ಸು |
೫೭
ಕಪ್ಪು ಕಾರ್ಮೋಡದಲಿ
ಫಳ್-ಎಂದು
ಹೊಳೆಯುವ
ಕೋಲ್ಮಿಂಚು


೫೮
ಚುಟುಕು
ಏನು
ಮಹಾ-
ಎನಬೇಡ
ಅದು ಅಟಂ-
ಮರಿಬೇಡ
೫೯
ಹಸುಳೆಯ
ಹಾಲುಗಲ್ಲದ
ದೃಷ್ಟಿಬೊಟ್ಟು-
ಈ ಚುಟುಕು
೬೦
ಹಿಡಿ ಹಿಡಿ
ಕಸಗಾಯಿಳಲ್ಲಿ
ಅಪ್ಪೆಮಿಡಿ
ಈ ಚುಟುಕು
೬೧
ಚುಟುಕು ಎಂದರೆ
ಎಂಥಾ ಚುಳುಕು
ಹುಲ್ಲ ಮೇಲಿನ
ಇಬ್ಬನಿ ಹನಿಯಲ್ಲೇ
ಅಡಕಿರಿಸಿಟ್ಟಂತೆ
ಸೂರ್‍ಯನ
ಥಳಕು- ಬೆಳಕು
೬೨
ಸಾಸಿವೆಯಷ್ಟೇ
ಇದೆ ಆಕಾರ
ಅಚ್ಚರಿ ಅಚ್ಚರಿ
ಸಪ್ತ ಸಾಗರವೂ
ಇಲ್ಲಿ ಗೋಚರ
೬೩
ಕಾಣುವುದು ಇದು
ಇಷ್ಟೇ ಇಷ್ಟು
ಅತ್ಯಲ್ಪ
ಇಗೋ ನೋಡು
ತೆರೆದಿಟ್ಟಿದೆ
ಕಲ್ಪ ಕಲ್ಪ
೬೪
ಕಾವ್ಯ
ರಸಗವಳದಲ್ಲಿಯ
ಉಪ್ಪಿನ ಕಾಯಿ |


೬೫
ಪ್ರತೀಕ್ಷೆ

ಬಿಸಿಲ ಧಗೆಗೆ
ಬಾಯ್ಬಿಟ್ಟ
ಧರೆ-
ಕಣ್ಣು ಮುಚ್ಚಾಲೆ
ಅಡುವ ಮೋಡದ
ಹಿಂಡು
ಫಳ್ಳನೇ ಮಿಂಚಿ
ಸಿಡಿಲೆರಗಿ
ಮಳೆ
ಕಪ್ಪರಸಿ
ಎಂದು ಬಿದ್ದಿತೋ ?

ನನ್ನ ಕವಿತೆಗಳು

ಜನೆವರಿ ೧೭ ರ ಬೆಳಗು
ಇಂದು ಮುಂಜಾನೆ
ಅಪ್ಪಾಜಿ ಸದ್ದಾಂ ಎಂದರಾರು ?
ಟಿ ವಿ ರೇಡಿಯೋ ಪೇಪರಿನಲ್ಲಿ
ಶಾಲೆ ಮನೆಯಲ್ಲಿ ಅವನದೇ ಸುದ್ದಿ- ಎಂದ: ಮಗ
ಏನು ಹೇಳಲಿ ?
ಒಂದು ಕ್ಷಣ ದಿಙ್ಮೂಢನಾದೆ:
ತೈಲ ಹೊನ್ನ ಕದ್ದ ಒಕ್ಕಣ್ಣ ರಕ್ಕಸನೆಂದು ಬಣ್ಣಿಸಿ
ಏಳು ಸುತ್ತಿನ ಕೋಟಿಯ ,ಸಪ್ತ ಸಾಗರದಾಚೆಯ
ಅತಿ ಮಾನುಷ ರಮ್ಯ ಕತೆಯ
ಖಳ ನಾಯಕನೆಂದು ಹೇಳಬೇಕೋ
ಕುವೈತ್ ಕಬಳಿಸಿದ ಕ್ರೂರಿ ಎನ್ನಬೇಕೋ
ತನ್ನವರಿಂದಲೇ ಪರಾಕು ಹಾಕಿಸಿಕೊಳ್ಳುವ
ಇರಾಕಿನ ದೊರೆಯೆನ್ನಬೇಕೊ-
ಎಂದು ಯೋಚಿಸುವಷ್ಟರಲ್ಲಿ
ಇಂದು ಬೆಳಗಿನ ಜಾವ
ಬಗದಾದ್ ಮೇಲೆ ಬಿದ್ದ ಬಾಂಬಿನಂತೆ
ಬುಶ್ ಎಂದರಾರು- ಒಮ್ಮೆಲೆ ದಾಳಿ ಮಾಡಿದ
ಚೇತರಿಸಿಕೊಂಡು-
ಹೆಡೆ ಎತ್ತಿ ಭುಸುಗುಡುವ ಘಟಸರ್ಪ
ಒಡಲಾಳದಿಂದ ಪುಟಿದೆದ್ದ ಬಡಬಾನಲ
ಅಲ್ಲ ಇನ್ನೂ ಏನೇನೋ ಆಗಿದ್ದಾನೆ......
ಹೆಳಲೆಂದು ಶಬ್ದಗಳಿಗೆ ತಡಕಾಡುವಾಗ
ನಿನಗ ಗೊತ್ತಿಲ್ಲ ,ಹೌದಲ್ಲ-ಎಂದು ಕೇಕೆ ಹಾಕಿ
ಕುಣಿದು
ಕಾರಂತಜ್ಜನಿಗೆ ಪತ್ರ ಬರೆಯುತ್ತೇನೆ
ಬರೆಯಲು ಕುಳಿತೇಬಿಟ್ಟ - ಮುಖ ತೊಳೆಯದೆ
ಕಾರಂತಜ್ಜನಿಗೆ ಪತ್ರ ಮುಟ್ಟುವ ಮುನ್ನ
ಪತ್ರಿಕೆಯಲ್ಲಿ ಉತ್ತರ ಪ್ರಕಟವಾಗುವ ಮುನ್ನ
ಏನಾಗುತ್ತಿದೆಯೋ |
ಯಾರಾದರೂ ನನ್ನ
ಮಗನ ಪ್ರಶ್ನೆಗೆ
ಉತ್ತರ ಕೊಡುತ್ತಿರಾ ?
* * * *
ಜನೆವರಿ ೧೭ , ೧೯೯೦











ಉಸಿರುಂಟು ಹೆಸರಿಲ್ಲ

ಜನಪದ ಸಮ್ಮೇಳನಕ ಪಂಡಿತರು ಕೂಡ್ಯಾರ
ಅಂಬಾರಿ ಮ್ಯಾಲ ಮೆರದಾರ |ಅವರೆಲ್ಲ
ಜನಪದರ ವೇಷ ಧರಿಸ್ಯಾರ

ಪಂಡಿತರೆಂಬೋರೆಲ್ಲ ಹೊತ್ತೀಗಿ ಹೊತ್ಕೊಂಡು
ಅರಮನಿಯಂತ ಹೋತ್ಲಾಗ |ಇಳದಾರ
ರಾಜ ಮರ್ಯಾದಿ ಪದದಾರ

ಸರಕಾರಿ ಸಾಲ್ಯಾಗ ಕಲಾವಿದರ್‍ನ ಕೂಡ್ಯಾಕಿ
ಕಾಲಕಸಕಿಂತ ಕಡಿಮಾಡಿಕ ಕಂಡವರು
ಸಭಾದಾಗ ಹೊಗಳಿ ಹದ್ಯಾರ

ಒಬ್ಬರಿನ್ನೊಬ್ಬರಿಗೆ ಹಾರತುರಾಯ್ಹಾಕಿ
ಮಾನ ಸನ್ಮಾನ ಮಾದ್ಯಾರ | ಪಂಡಿತರು
ಬಿರುದು ಬಾವಲಿನ ಪಡದಾರ

ಜನಪದ ಸಾಹಿತ್ಯ ಉಳಿಬೇಕ್ಬೆಳಿಬೇಕಂತ
ಉದ್ದುದ್ದ ಭಾಷಣ ಬಿಗಿದಾರ ಪಂಡಿತರು
ರಕ್ಷಕರು ತಾವೆಂದು ಸಾರ್‍ಯಾರ

ಬಾಯಿಂದ ಬಾಯಿಗೆ ಹರಿದಂತ ಜನಪದವ
ಹೊತಿಗ್ಯಾಗ ಪ್ರಿಂಟ ಮಾಡ್ಯಾರ ಪಂಡಿತರು
ಲಾಭ ಕೀರ್ತಿಗಳ ಪಡದಾರ

ನಾಡೀನ ತುಂಬೆಲ್ಲ ಸುದ್ದೀಯು ಹರಡೈತಿ
ಮಂತ್ರಿ ಪಂಡಿತರೆ ಪೇಪರ್‍ನಾಗ ತುಂಬ್ಯಾರು
ಜನಪದರ ಹೆಸರ ಸಳಿವಿಲ್ಲ
*****
[ ಜೂನ ೧೯೮೫ ]














ನರಸೋತು ಹೆಣವು ಆಗ್ಯಾಳ

ಚುಕ್ಕಿ ಚಂದ್ರಾಮರು ಬಿಕ್ಕಳಿಸಿ ಹೇಳ್ಯಾರ
ಅಕ್ಕ ನಿನ ಇನಿಯಬರಲಿಲ್ಲ ರಾತ್ರೆಲ್ಲ
ನಕ್ಕಾಡೊದೆಮಗ ಬ್ಯಾಡವ್ವ

ಚೊಕ್ಕ ಚಿನ್ನದಂತ ಅಕ್ಕರತಿ ಮನತುಂಬಿ
ನಕ್ಕು ನಲಿವಂತ ದಿನದಾಗ |ನಿನ್ನಿನಿಯ
ಮುಕ್ಕಾದ ಮಡಕಿ ಮಾಡ್ಯಾನ

ಸಕ್ಕರಿ ಗೊಂಬೆಂತ ಮಕ್ಕಳ ಪಿರುತಿಯ
ಮಿಕ್ಯಾಕ ದೂರ ಉಳದಾನೊ| ನಿನಗಂಡ
ಮುಕ್ಕಳಿದ ನೀರ ಉಗಳಾಂಗ

ಮಕ್ಕಳು ಕೇಳೀದರ ಅಕ್ಕೇನ ಹೇಳ್ಯಾಳ
ಸಿಕ್ಕಿ ಬಿದ್ದಾಳ ಜೇಡರ \ ಬಲಿಯಾಗ
ಮಿಕ್ಯಾಂಗ ಉಳಿದು ಬದುಕ್ಯಾಳ

ಪುರುಷನ ಒಲವಿಲ್ದ ವಿರಸದಿ ತಾಬೆಂದು
ನರಸೋತು ಹೆಣವು ಆಗ್ಯಾಳ ಬಾಲೀಗೆ
ಹರ್ಷಿಲ್ಲ ಕೂಡಿ ಬಾಳಾಕ

ಕಂದಮ್ಮರ ಬೆಳಸಾಕ ಬೆಂದೋದ್ರ ಏನಾಯ್ತು
ಚಂದಾಗಿ ವಿದ್ಯಾವ ಕಲಿಸ್ಯಾಳ |ಹಡದವ್ವ
ಸುಂದರ ಕನಸು ಕಂಡಾಳ
***** [ ಕೇಸರಿ ಗರ್ಜನೆ-೧೯೮೭]


















ಬಿಡಿ ತ್ರಿಪದಿಗಳು

ಕಳ್ಳಿ
ಕಳ್ರು ಬರತಾರಂತ ಬೆಳ್ಳಂಬೆಳತನ ಕಾದು
ಕಳ್ಳಾನ ಪಿರುತಿ ಕಾದಿದ್ದೆ ಎಲೆ ತಡುಗಿ
ಮಳ್ಳನ್ನ ಮಾಡಿ ಕದ್ದೆಲ್ಲ


ನಲ್ಲೆ
ಕುಂತರೂ ನಿಂತರೂ ನಿನ ಚಿಂತಿ ಮಾರಾಯ್ತಿ
ಮಂತರವ ಹಾಕಿ ಗೊಂಬೀನ ಕುಣಿಸೀದಿ
ಸಂತ್ಯಾಗೂ ಕನಸು ಬೀಳ್ತಾವ





ಆಧುನಿಕ ಅತ್ತೆ
ಸತ್ಯುಳ್ಳ ಅತ್ಯೆದಿರು ಮತ್ತೇನು ಮಾಡತಾರ
ಕುತ್ತಿಗೆ ಕೊಯ್ಯು ಮಾಕೆಲಸ ಮಾತೆಯರು
ಹತ್ಮಗನ ತೆಲಿಯ ಕೆಡಿಸ್ಯಾರ


ತಾಯಿಯ ಉಪದೇಶ
ಅತ್ತೀಯ ಮನಿಯಾಗ ಸೊತ್ತಾಗಿ ಇರಬೇಡ
ಕತ್ತ್ಯಾಗಿ ಮೊದಲ ದುಡಿಬೇಡ | ನನ ಮಗಳೆ
ಗತ್ತೀಲೆ ನೀನು ಮೆರಿಬೇಕು

ಜೋಡಾದ ತಂಗಿ
ಆಡಾಕ ಬಾ ಅಂದ್ರ ಬ್ಯಾಡಂತ ಬಯತಿದ್ದಿ
ಕಾಡಿದರ ಏಟು ಕೊಡತತತಿದ್ದಿ ಹಡದವ್ವ
ಜೋಡಾದ್ಲು ತಂಗಿ ಇನ್ನಮ್ಯಾಗ



ಮುದ್ದು ಮಕ್ಕಳು
ಕಲಕಲ ದನಿ ಮಾಡಿ ಕಿಲಕಿಲ ನಕ್ಕೋತ
ನಲಿದರ ಮುದ್ದು ಮಕ್ಕಳು ಮನಿಯಾಗ
ಒಲವೀನ ಸೆಲೆಯು ಚಿಮ್ಮೈತಿ







ಅಂದಿನ ಮಗು
ಚಿನ್ನಾದ ಚಿಣಿಫಣಿಗೆ ಬಣ್ಣಾದ ಮಣಿಕಟ್ಟು
ರನ್ನದ ಗೋಲಿ ಕೈಯೊಳಗ ಹಿಡಕೊಂಡು
ಬಿನ್ನಾನೆ ಆಡಿ ಬರತಿತ್ತು

ಇಂದಿನ ಮಗು
ಹೆಗಲಾಗ ಹೊತ್ತಂತ ಪುಸ್ತಕದ ಭಾರಕ್ಕ
ಬಾಲಕನ ಬೆನ್ನು ಬಾಗೇತಿ ಮನಸಿಲ್ದ
ಸಾಲಿಗೆ ಹೋಗಿ ಬರತೈತಿ


ಲೋಕಕ್ಕ ಪರಿಸಿದ್ದಿ ನಾಕಕ್ಕ ಸರಿಸಾಟಿ
ಯಾಕಕ್ಕ ಒಮ್ಮೆ ಬರಬಾರದು ಧರ್ಮಸ್ಥಳಕ
ನೂಕಾಕ ಪಾಪ ದೂರಕ್ಕೆ

ನಂಜೀನ ದೇಹಕ್ಕ ಅಂಜಿಕೆ ಯಾತಕ
ಸಂಜೀಯ ಹೊತ್ತು ಧ್ಯಾನಿಸಿ ನೆನೆದರ
ಮಂಜುನಾಥ ಕೃಪೆಯ ತೋರ್‍ಯಾನು



ಹಾಲ್ಮನಸು ಅರಳಾಕ

ಗಡಿಬಿಡಿಯ ಗೋಳಾಟ ಯಂತ್ರಗಳ ಕಿರುಚಾಟ
ಸಾಕಾಯ್ತು ಏನೋ ಈ ಬವಣೆ ಮಾನವನೆ
ಏಕಾಂತ ಅರಸಿ ಹೊರಟೇನೋ


ಬೆಳಗಾಗ ಬೇಗೆದ್ದು ಬೇರಾರ ನೆನೆಯದಲೆ
ಕೆರೆದಡದ ಮ್ಯಾಲೆ ಕುಂತೇನೋ ಮಾನವನೆ
ಪರಿಸರದ ಚಿಂತೆ ಬಂತೆನೋ


ಏನಾದ್ರು ಏನೀಗ ಕೆಟ್ಟೈತಿ ನೆಲಜಲ
ಉಸಿರಾಟಕಿಷ್ಟು ಸಿಗವಲ್ದು ಪ್ರಾಣವಾಯು
ಇಡಿಕಿರಿದು ತುಂಬಿ ಇಂಗಾಲ


ಹಸುಗೂಸಿನ ಹಾಲ್ಮನಸು ತುಸುವಾದ್ರು ಅರಳಾಕ
ಕೆರೆವನಗಳಿರಲಿ ನಾಡಾಗ ಭವಿಷ್ಯದ
ಗೋಳಿನ ಬಾಳ ತಣಿಸಾಕ






ಕೊಳವೆ ಬಾವಿನೀರು ಕೊಳೆಯಿಂದ ಬಹುದೂರ
ತಿಳಿನೀರ ಬುಗ್ಗೆ ವರದಾನ ಜಗವೆಲ್ಲ
ಎಳೆತೆಂಗಿನ್ಹಾಲು ಸವಿಯಲಿ

ಕಲ್ಲು ಸಕ್ಕರೆ ಪಾಕ ಮೆಲ್ಲಕೆ ಸವಿಯಿರಿ
ಬಲ್ಲಂತ ಮಾತು ಹೇಳೀನಿ ಅನುಭಾವ
ಬಲ್ಲವರು ತಿದ್ದಿ ಓದಿರಿ

ಹಸುಗೂಸಿನ ಹಾಲ್ಮನಸು ತುಸುವಾದ್ರು ಅರಳಾಕ
ಹಸನಾದ ಮನಸು ಶಿಕ್ಷಕಗ ಇದ್ದರ
ನಸುನಗುತ eನ ಬೆಳಿತೈತಿ



ಅಚ್ಚೇರು ಹೊನ್ನ ಕೊಡುವೇನ

ಎಚ್‌ಐವ್ಹಿ ಬರದಂಗ ಎಚ್ಚರಾಗಿ ಇರಬೇಕು
ಕಚ್ಚಿ ಹರಕ ಬುದ್ಧಿಬಿಡಬೇಕುನನರಾಯ
ಅಚ್ಚೇರ ಹೊನ್ನ ಕೊಡುವೇನ

ರೋಗಂದ್ರ ರೋಗಲ್ಲ ಜಡ್ಡಂದ್ರ ಜಡ್ಡಲ್ಲ
ಇದು ಬಂದ್ರ ಬದುಕಿ ಉಳಿದಿಲ್ಲ ಯಾರ್‍ಯಾರು
ಮದ್ದಿನ್ನು ಕಂಡು ಹಿಡಿದಿಲ್ಲ

ಆ ರೋಗ ಈ ರೋಗ ಮಾರೋಗ ಬಂದ್ರೂನು
ಏಡ್ಸ ಮಾರಿ ಬಂದು ಹೊಗಬಾರದು ದೇಹದಾಗ
ಸುಡುಗಾಡು ಸೇರಿಸಿ ಬಿಡತೈತಿ

ಹಂಗ್ಬಂತು ಹಿಂಗ್ಬತು ಹೆಂಗ್ಬಂತು ಈಮಾರಿ
ಹೆಂಗೆಂಗೋ ಬಂತು ಜಗದಾಗ ಸೂಳ್ಯಾರ
ಸಂಗದಿಂದ ಬಂತು ಬೆನ್ನತ್ತಿ

ಹಾವ ಕಡಿದ್ರ ಉಳಿಬಹುದು ಸಿಡಿಲ ಹೊಡಿದ್ರುಳಬಹುದು
ಏಡ್ಸ ಮಾರಿ ಬಂದ್ರ ಮನುಜಗ ಶಿವಶಿವ
ಉಳಿಲಾರ್‍ದು ಜೀವ ನಾಕದಿವ್ಸ

[೧೯೯೬]









ಯುಗಧರ್ಮ ಶಿಲ್ಪಿ

ಬಸವ ಧರ್ಮದ ಭೀರು ಕನ್ನಡದ ಕಟ್ಟಾಳು
ಮಹಿಮೆ ಮಹಾಂತನಲಿ ಬೆಸುಗೆ ಮಾತು ಮನಗಳು

ಜಗದಗಲ ಸಂಚರಿಸಿ ಮುಗಿಲಗಲ ಬಿತ್ತರಿಸಿ
ನುಡಿದ ಮಾಣಿಕ ದೀಪ್ತಿ ಮಿಗೆಯಗಲ ಪ್ರಜ್ವಲಿಸಿ
ಅಳಿಸಿತ್ತು ಅeನ ಅಂಧಕಾರಗಳೆಲ್ಲ
ಹೊಲಸಿನ ಹೊಲೆಯಿಲ್ಲ ಕೊಲುವ ಮಾದಿಗನಿಲ್ಲ

ಸಕಲ ಜೀವಾತ್ಮರಿಗೆ ಲೇಸನೆ ಬಯಸುತಲಿ
ಕಮ್ಮಟದ ಕರ್ತಾರ ಲೋಕದನುಭಾವದಲಿ
ಮಾಡಿದನು ಲಿಂಗಕ್ಕೆ ಮಾಡಿದನು ಜಂಗಮಕೆ
ಒಂದಿನಿತು ಮನದಲಿ ತಾಳದಲೆ ಬೇಸರಿಕೆ

ಜಗದಗುರು ಕಾಯಕದಿ ಜನಮನದಿ ಸಾಮಾನ್ಯ
ಧರೆ ಹತ್ತಿ ಉರಿಯುದನು ನಿಲಿಸುವ ನೆಲೆ ಅನನ್ಯ
ಯುಗ ಧರ್ಮ ಮೂರ್ತಿ ಕೆತ್ತಿ ನಿಲಿಸಿದ ಮೂರ್ತಿ
ಜಗದ ಜಾಗೃತ ಮನಕೆ ಸಂಜೀವನ ಸ್ಫೂರ್ತಿ



ಉಳಿ ಮಟ್ಟದ ಲಿಂಗ
ನೀಳ ಕಾಯದ ಬೆಡಗು ಭಸ್ಮಲೇಪಿತ ನೊಸಲು
ತುಟಿಗಳಂಚಿನೀಚೆ ತಾಂಬೂಲ ನಗೆ ಹೊನಲು

ಅಜಾತ ಶತ್ರು ಹಿರಿಕಿರಿಯ ಗೆಳೆಯೆರೆಲ್ಲರಲಿ
ಎಳ್ಳು ಬೆಲ್ಲದ ಸಲುಗೆ ಕರುಳ ಕುಡಿ ಮಿಡಿಗಳಲಿ
ಮಾತು ಮಾತಿಗೆ ಜಿದ್ದು ಹಾಸ್ಯ ಲಾಸ್ಯ ನಿಲುವು
ವಾದ್ಯ ವಾದನದ ಗುಂಗು ಗೀತ ಸಂಗೀತದೊಲವು

ಬೆರಳನಡೆ ಸೊಗಸು ಕುಂದನದ್ಹರಳು ವಿನ್ಯಾಸ
ಭಾವದೀಪ್ತಿಯ ಹೊಳಪು ಲಯ ಲೀಲಾ ವಿಲಾಸ
ಶರಣ ಖಾಸ್ಗತರಲ್ಲಿ ಮುಗ್ಧ ಶ್ರದ್ಧೆಯ ಹರಕೆ
ದಣಿವರಿಯದ ದುಡಿಮೆ ಭಜನೆ ಜಾತ್ರೆ ಉತ್ಸವಕೆ

ತುಂಬು ಬಾಳ ಪಯಣದಿ ಸವೆದಿಲ್ಲ ಅರೆಹಾದಿ
ಯಾರಿಗೇನನೂ ಹೇಳಕೇಳದೆ ನೀಹೋದೆ
ಉಳಿ ಮುಟ್ಟದ ಲಿಂಗ ಪೆಡಸು ಮಣ್ಣಿನ ಪ್ರತಿಮೆ
ಹಳ್ಳೀ ಹಂಬಲದ ಜೀವ ಚೇತನದ ಚಿಲುಮೆ
******* ೧೯.೮.೨೦೦೧



ಗುರುವಿನ ಹುಡುಗಾಟ

ಸತ್ಸಂಗಿಗಳೆಲ್ಲ ಕುಂತ ಕೇಳಿರಿ ಕೌತುಕದ ಮಾತೊ
ಭಾವದ ಒಳಗಡೆ ಗಾಯವ ಮಾಡಿದ ಗುರುವಿನ ಹುಡುಗಾಟೊ

ಶರಣರು ಹುಟ್ಟಿದ ನಾಡಿನ ಒಳಗ
ಯೋಗದ ಅವತಾರೊ |ಸಹಜ
ಯೋಗದ ಅವತಾರೊ
ಗಡಿಬಿಡಿ ಬದುಕಿನ ಜಂಜಾಟ ಹರಿಸಿ
ಒಡಲ ಒಳಗಿನ ದೇವರ ತೋರಿಸಿ
ಸತ್ಯದ ಸಂಭ್ರಮ ಬಿಡದಲೆ ತುಂಬ್ಯಾರೊ

ಶೇಷ್ಠರ ಸಾಧನೆ ಗುಟ್ಟನು ತಿಳಿಸಿ ಶ್ರದ್ಧೆಯ ತುಂಬ್ಯಾರೊ
ಕೆಟ್ಟ ದೃಷ್ಟಿಲಿ ನೋಡೂದ ಬಿಡಿಸಿ
ದಿಟ್ಟ ಭಾವದ ಉಡುಗೆಯ ತೊಡಿಸಿ
ಬಟ್ಟ ಬಯಲಿನ ಧ್ಯಾನವ ಉಣಿಸ್ಯಾರೊ

ಸ್ವಾತಿ ಮಳೆಯ ಹನಿ ಮುತ್ತಾಗುವದನು ಸಾಕ್ಷಾತ್ಕರಿಸ್ಯಾರೊ
ತಿಲದೊಳಗಿರುವ ತೈಲದ ರೂಪನು
ಹಾಲೊಳಗಿರುವ ತುಪ್ಪದ ಕಂಪನು
ಅನುಭವದಿಂದಲಿ ಅರಿವುದ ಕಲಿಸ್ಯಾರೊ

ಸತ್ಯಪ್ರಪಂಚದ ರಾಮರಾಜ್ಯ ಸಂಕಲ್ಪವ ತೊಡಿಸ್ಯಾರೊ
ತಾನಾರೆಂಬುದ ಮನದಟ್ಟು ಮಾಡಿಸಿ
ಲೀಡರಾಗಿ ಬದುಕೂದ ಕಲಿಸಿ
ಕರ್ಮಯೋಗದ ಕಾಯಕ ನಡಿಸ್ಯಾರೊ

ಸಹಜ ಯೋಗದ ಹದಿಮೂರೆ ದಿನದಲಿ ಮೋಡಿಯ ಮಾಡ್ಯಾರೊ
ಹಾಲ ಹಸು ಮಗು ಕನಸು ಕಂಡಂತೆ
ಂಉಕನು ಕದ್ದು ಬೆಲ್ಲ ತಿಂದಂತೆ
ಭಾವದೊಳಗನುಭಾವವ ತುಂಬ್ಯಾರೊ













ನಡೆದಾಡುವ ದೇವರು

ಮುತ್ತಿನಂತ ಮಾತಿದು ಮತ್ತ ಮತ್ತ ಹೇಳತೀನಿ
ಚಿತ್ತವಿಟ್ಟು ಕೇಳಿರಿ ನೀವೆಲ್ಲ
ಚಿತ್ತವಿಟ್ಟು ಕೇಳಿದರ ನೀವೆಲ್ಲ ಪ್ರವಚನವ
ಸತ್ಯದ ದರುಶನ ಆಗತದ
ಕತ್ತಲ ದೂರ ಓಡಿ ಹೋಗತದ

ಆ ಶಾಸ್ತ್ರ ಈಶಾಸ್ತ್ರ ಪುರಾಣ ಇದ್ರೂನು
ಪ್ರವಚನಕಿಂತ ಮಿಗಿಲಿಲ್ಲ ಜಗದಾಗ
ಸಿದ್ಧೇಶ್ವರರಂತ ಶರಣಿಲ್ಲ ಸದ್ಯ
ಭೂಮಿಯ ಮೇಲೆ ಯಾರಿಲ್ಲ

ಬೆಳ್ಳನ್ನ ಬಿಳಿಯಂಗಿ ತೆಳ್ಳನ್ನ ತಿಳುಲುಂಗಿ
ಕೊಳ್ಳಾನ ವಸ್ತ್ರ ತೆಗೆದಿರಿಸಿ ಕುಳಿತರ
ಒಳ್ಳೊಳ್ಳೆ ಮಾತ ಸುರಿತಾವ
ಹೊಟ್ಟೆನ್ನ ಹಳ್ಳ ಕರಗತಾವ

ಅಂದದ ಮಾತಲ್ಲ ಚಂದದ ಮಾತಲ್ಲ
ಕುಂದದ ಮಾತ ನುಡಿತಾರೊ ದಿನದಿನ
ಕುಂತಲ್ಲೆ ಮಗ್ನ ಮಾಡತಾರೊ
ತಾಸತನಕ ಮೈಯ ಮರಸತಾರೊ

ಮಾತಂದ್ರ ಮಾತಲ್ಲ ತತ್ವ ಅಂದ್ರ ತತ್ವ ಅಲ್ಲ
ಮಾತು ತತ್ವ ಎರಡು ಮೀರಿದ್ದು
ಮಾತು ತತ್ವ ಎರಡು ಮೀರಿದ ಅನಭಾವ್ನ
ತುತ್ತ ಮಾಡಿ ನಮಗೆಲ್ಲ ಉಣಿಸ್ಯಾರೊ
ತಿಳಿತಿಳಿ ತಿಳಿತಿಳಿ ಮಾಡಿ ಕುಡಿಸ್ಯಾರೊ

ಆಸೆಯನು ತೊರೆದವರು ಕಿಸೆಯನ್ನು ಹಚ್ಚದವರು
ದ್ವೇಷವನು ಮೊದಲೆ ಮರೆತವರು ಪ್ರವಚನದ
ದಾಸೋಹವನ್ನೇ ನಡಿಸ್ಯಾರೊ
ಬದುಕಿನ ಒಗಟನು ಬಿಡಿಸ್ಯಾರೊ

ಎಲ್ಲವನು ಬಲ್ಲವರು ಅಲ್ಲಮನ ಅನುಯಾಯಿ
ಸೊಲ್ಲಿಹರು ಪ್ರಭುವಿನ ವಚನಕ್ಕ ನಿರ್ವಚನ
ಬಲ್ಲವರು ಮೆಚ್ಚು ಹಂಗ ಬರೆದಾರೊ

ನಡೆದಾಂಗ ನುಡಿವವರು ನುಡಿದಾಂಗ ನಡೆವವರು
ನಡೆ ನುಡಿಯಲ್ಲಿ ಎರಡಿಲ್ಲ
ನಡೆ ನುಡಿಯಲ್ಲಿ ಎರಡಿಲ್ಲದ ಜಂಗಮ
ಜ್ಯೋತಿಯೇ ಆಗ್ಯಾರೊ ಜಗಕೆಲ್ಲ ಪರಂ-
ಜ್ಯೋತಿಯೇ ಆಗ್ಯಾರೊ ಜಗಕೆಲ್ಲ
ನಡೆದಾಡುವ ದೇವರು ಜಗಕೆಲ್ಲ
******[ ೧೫-೦೧-೨೦೦೧]
೧೦
ವಿಘ್ನೇಶ್ವರನ ಮಜಕೂರ

ಗಜಾನ ಗಣಪತಿ ಮಜಾ ನಿಮಗ ಹೇಳತೀನಿ
ಗಜಿಬಿಜಿ ಮಾಡಲಾರದ ಕೇಳಬೇಕ
ಗಜಿಬಿಜಿ ಮಡಲಾರದ ಕೇಳಿದರ ವಿಘ್ನೇಶ್ವರನ
ಮಜಕೂರ ನಿಮಗ ತಿಳಿತೈತಿ

ಮಣ್ಣಿನ ಮಗನಾಗಿ ಭೂಮಿತಾಯಿ ಕಂದನಾಗಿ
ಚಂದಾಗಿ ಒಂದಾಗಿ ಬೆಳೆದು ನಿಂತಾನ
ಚಂದಾಗಿ ಒಂದಾಗಿ ಬೆಳೆದು ನಿಂತು ನಾಡಿಗೆಲ್ಲ
ಕುಂದದ ಕಾಯಕ ಕಲಿಸಿ ಕೊಟ್ಟಾನ

ವೇದ ಪುರಾಣ ಓದಿದೋರಿಗಿಂತ ಯಜ್ಞಯಾಗ ಮಾಡಿದೋರ್‍ಗಿಂತ
ಒಕ್ಕಲು ಮಗನು ಬಹಳ ದೊಡ್ಡವನು
ಒಕ್ಕಲು ಮಗನು ದೊಡ್ಡವನೆಂದು ಸಾರುತ್ತ
ಒಕ್ಕಟ್ಟಾಗಿ ಬದುಕು ರೀತಿ ತಿಳಿಸ್ಯಾನ

ಭೂಮಿ ತಾಯಿ ಹೊಟ್ಟಿ ಸೀಳಿ ಕರಕಿಹುಲ್ಲ ಕಡ್ಯಾಕ ಮಾಡಿ
ಹದಮಾಡಿ ಬೆಳೆಯೊ ವಿದ್ಯಾ ಬೆಳಸ್ಯಾನ
ಹದಮಾಡಿ ಬೆಳೆಯೊ ವಿದ್ಯಾ ಬಳಸುತ್ತ ಕಾಳಕಡಿ
ಹಂಚಿಕೊಂಡು ಉಣ್ಣುವುದು ಕಲಿಸ್ಯಾನ ಹಣ್ಣು ಹಂಪಲ
ಹಂಚಿಕೊಂಡು ತಿನ್ನೂದು ಕಲಿಸ್ಯಾನ

ಒಕ್ಕಲುತನ ಕಲಿಯಲಾರದೆ ತಿಕ್ಕಲುತನ ಮಾಡೋವಂತ
ಪುಕ್ಕಲು ಜನರ ಯಜ್ಞಕ್ಕ ವಿಘ್ನ ಮಾಡ್ಯಾನ
ಪುಕ್ಕಲು ಜನರ ಯಜ್ಞಕ್ಕ ವಿಘ್ನವನ್ನು ಮಾಡುತ್ತ
ವಿಘ್ನೇಶ್ವರನೆಂಬ ಹೆಸರು ಪಡದು ಬಿಟ್ಟಾನ
ವಿಘ್ನಕಾರಕ ನಾಯಕನಾಗಿ ಬೆಳೆದು ನಿಂತಾನ

ಒಕ್ಕಲು ಮಕ್ಕಳ ದವಸ ಧಾನ್ಯ ತಿಂದು ಹಾಳು ಮಾಡುವಂತ
ಇಲಿರಾಯನ್ನ ವಾಹನ ಮಾಡಿಕೊಂಡಾನ
ಇಲಿರಾಯನ್ನ ವಾಹನ ಮಾಡಿಕೊಂಡ ವಿಘ್ನೇಶ್ವರ
ನಾಗರಾಜನ್ನ ಹೊಟ್ಟಿಗೆ ಬಿಗಿದು ಕೊಂಡಾನ
ವಿಷ ನಾಗರ ಹಾವನ್ನ ಹೊಟ್ಟಿಗೆ ಕಟ್ಯಾನ

ವಿಘ್ನೇಶ್ವರನ ಅವತಾರ ನೋಡಿ ಜಾಣ ಮಂದಿ ಸಂಚು ಹೂಡಿ
ಊಟ ಉಪಚಾರಕ್ಕಂತ ಕರೆದು ತಂದಾರ
ಊಟ ಉಪಚಾರಕ್ಕಂತ ಕರೆದು ತಂದು ಕಡಬು ತಿನ್ನಿಸಿ
ಮೋಸದಿಂದ ತಮ್ಮ ಕಡಿಗೆ ಒಲಿಸಿ ಕೊಂಡಾರ
ನಾಲಿಗಿ ರುಚಿಗೆ ದಾಸನ್ನಾಗಿ ಮಾಡಿ ಬಿಟ್ಟಾರ

ದಿನಕ್ಕೊಂದೊಂದ ಅಡಿಗಿ ಮಾಡಿಸಿ ಒಬ್ಬರಾದ ಮೇಲೆ ಕರೆದು
ಕರದು ಕಡಬು ಊರಣ ಹೋಳೀಗಿ ರುಚಿ ಹಚ್ಯಾರ
ಕರದ ಕಡಬು ಹೂರಣ ಹೋಳಿಗಿ ರುಚಿ ಹಚ್ಚಿದ ಜಾಣರು
ಒಕ್ಕಲು ಮಕ್ಕಳ ಸಂಗದಿಂದ ದೂರ ಮಾಡ್ಯಾರೊ
ತಿಂಗಳಗಟ್ಟಲೆ ನನೆಯೊಳಗ ಅಡಗಿಸಿ ಇಟ್ಟಾರ

ಗಣಪತಿ ನಮ್ಮ ನಾಯಕ ಮರೆತು ಬಿಟ್ಟ ತನ್ನ ಕಾಯಕ
ಎಲ್ಲಿ ಮಾಯ ಆದನಂತ ಗಾಬರಿ ಬಿದ್ದಾರ |ಜನ
ಎಲ್ಲಿ ಮಾಯಾದನಂತ ಗಾಬರಿಬಿದ್ದು |ಜೋಕುಮಾರನ್ನ
ಮನಿಮನಿ ಹುಡುಕಲಿಕ್ಕೆ ಅಟ್ಟಿ ಬಿಟ್ಟಾರ

ಸಂದಿ ಗೊಂದಿ ಒಳಗ ನಿಂತು ಪರದಾ ಹಿಂದೆ ಅಡಗಿ ಕುಂತು
ಜೋಕುಮಾರಗೂ ಚಳ್ಳೆ ಹಣ್ಣು ತಿನಿಸಿ ಬಿಟ್ಟಾನ
ಜೋಕುಮಾರಗೂ ಚಳ್ಳೆ ಹಣ್ಣು ತಿನಿಸಿ ಬಿಟ್ಟು ಗಣಪತಿಯು
ಮುಖವಾಡ ಹಾಕಿಕೊಂಡು ತಿರುಗೂದ ಕಲಿತಾನ
ಆನೆ ಮುಖ ಹಾಕಿಕೊಂಡು ತಿರಗಾಕ ಹತ್ತ್ಯಾನ

ಹುಳ್ಳ ಅಂಬಲಿ ಉಂಡ ಜೋಕ ಹುಳ್ಳುಳ್ಳಗ ಮುಖಮಾಡಿ
ಓಣಿ ಓಣಿ ಕೇರಿ ಕೇರಿ ಸುತ್ತೇ ಸುತ್ಯಾನ
ಓಣಿ ಓಣಿ ಕೇರಿ ಕೇರಿ ಸುತ್ತುತ್ತ | ಒಂದಿನ
ಗಣಪತಿ ಇರೋ ಜಾಗ ಪತ್ತೆ ಹಚ್ಚಾನ
ಮಖವಾಡ ತಗೆದಾಗ ಗಪ್ಪನ ಹಿಡದಾನ
ಮನೆಯಿಂದ ಹೊರಗ ಅವನ್ನ ಎಳೆದು ತಂದಾನ

ದರದರೆ ಎಳದು ತಂದು ದಾರಿ ಮ್ಯಾಗ ನಾಕು ಜಡದು
ಹೆಗಲ ಮ್ಯಾಲ ಹೊತ್ತು ಕೊಂಡು ತಿರಗಾಕ ಹತ್ತಾನ
ಹೆಗಲ ಮ್ಯಾಲ ಹೊತ್ತು ಕೊಂಡು ತಿರುಗುತ್ತ ಊರತುಂಬ
ಮೆರವಣಿಗೆ ಮಾಡುತ್ತ ನಡೆದುಟ್ಟಾನ
ಮದ್ದು ಗುಂಡು ಪಟಾಕಿಗೆ ಬೆಂಕಿ ಹಚ್ಯಾನ
ನಾಡ ತುಂಬ ದೊಡ್ಡ ಗದ್ದಲ ಎಬ್ಬಿಸಿ ಬಿಟ್ಟಾನ

ಗಣಪ್ಪ ಗಣಪ್ಪ ಮೋರಯ್ಯ ಪುಂಡಿ ಪಲ್ಲೆ ಸೋರಯ್ಯ
ಗಣಪತಿ ಬೊಪ್ಪ ಮೋರಯ್ಯ ಪುಂಡಿ ಪಲ್ಲೆ ಸೋರಯ್ಯ
ಹಾಡ ಹಾಡತ ಹಳ್ಳದ ದಾರಿ ಹಿಡದ ಬಿಟ್ಟಾನ
ಕೇಕೆ ಹಾಕತ ಹಳ್ಳದ ದಾರಿ ಹಿಡಿದು ಬಿಟ್ಟಾನ
ಹಳ್ಳದ ಮಡುವಿನಾಗ ಒಗದು ಬಿಟ್ಟಾನ

ಗಣಪತಿ ಪಾಪೆ ಮಳುಮುಳುಗೆದ್ದು ಐದು ಸಾರೆ ನೀರು ಕುಡಿದು
ನೀರೊಳಗ ನೀರಾಗಿ ಕರಗಿ ಬಿಟ್ಟಾನ
ಒಕ್ಕಲು ಮಗ ನೀರು ಪಾಲು ಆಗಿಬಿಟ್ಟಾನ

ನವಲಗುಂದ ತಾಲುಕನ್ಯಾಗ ಬೆಣ್ಣಿ ಹಳ್ಳದ ದಂಡಿ ಮ್ಯಾಗ
ಕಡದಳ್ಳಿ ಕಲ್ಮೇಶ ನೆಲಿಸಿ ನಿಂತಾನ ಅವನ ಕಂದ
ಚಂದ್ರಗೌಡ ಚಂದದಿಂದ ಹಾಡ ಕಟ್ಟ್ಯಾನ

********[೨೮_೭_೨೦೦೩]



೧೧
ಕಾಣೆಯಾಗಿದ್ದಾನೆ

ಕಾಣೆಯಾಗಿದ್ದಾನೆ ,ಹೌದು
ಇದೇ ಈಗ
ಕಾಣೇಯಾಗಿದ್ದಾನೆ
ನಿನ್ನೆ ಮೊನ್ನೆ ಇಲ್ಲೆ ಇದ್ದ
ಇದೀಗ ಕಾಣೆ ಯಾಗುವ ಮುನ್ನ
ಇಲ್ಲೇ ಇದೇ ಜಾಗದಲ್ಲೆ ಇದ್ದ
ನನ್ನಲ್ಲಿ ಇದ್ದ ನಮ್ಮಲ್ಲಿ ಇದ್ದ
ಎಲ್ಲರೊಳಗೂ ಹೂತುಕೊಂಡಿದ್ದ -ಪೂತುಕೊಂಡಿದ್ದ

ಗೆಳೆಯರೆ ,
ಕರಿಕಲ್ಲ ಗಡ್ಡದ ಕತ್ತಲೆಯ ಗವಿಯಲ್ಲಿ
ಗಸ್ತಿ ತಿರುಗಿ
ಹುಡುಕಾಡಿ ಬಿಡಿ
ಸಿಕ್ಕಾನು
ಜಾತಿ ನಾಯಿ ಪಡೆಯನು ಬಳಸಿ ನೋಡಿ

ನೋಡಿ , ನನ್ನದೇನೂ ತಪ್ಪಿಲ್ಲ
ಏಳೇಳು ಬೆಟ್ಟ ಸಪ್ತ ಸಾಗರ ಹಳ್ಳ ಕೊಳ್ಳಗಳ ಮಧ್ಯೆ
ಏಳು ಸುತ್ತಿನ ಕೋಟೆಯ ಅಂದದರಮನೆಯಲ್ಲಿ
ಕನಸಿನ ರಾಜಕುಮಾರಿಯಂತೆ ಬಂಧಿಸಿಟ್ಟಿದ್ದೆ
ಬೇಕಿದ್ದರೆ ನೋಡಿ
ಕೀಲಿಕೈ ಇನ್ನೂ ನನ್ನಲ್ಲೆ ಇದೆ
ಈಗಹೇಳೀ ತಪ್ಪು ನನ್ನದೇ

ಥೇಟ್ ನಮ್ಮಂತೆ ಇದ್ದ
ಆಯ ಆಕಾರ ರೂಪ ಎಲ್ಲವೂ ನಮ್ಮ ಹಾಗೆ
ಇಷ್ಟು ಸಾಕಲ್ಲವೆ ಚಹರೆ ?
ಹುಡುಕಿ ನೋಡಿ
ಇಲ್ಲೇ ಎಲ್ಲಾದರೂ ನಿಮ್ಮೆದುರೇ
ಇದ್ದಿರಬಹುದು
ಅಲ್ಲಿ ಇಲ್ಲಿ ಎಲ್ಲಾಕಡೆ
ತಡಕಾಡಿ ಹುಡುಕಿಬಿಡಿ
ಇದ್ರೆ ಈಗಲೇ ಇಲ್ಲಿಗೆ ಕಳಿಸಿಕೊಡಿ
ಇಲ್ಲವೆ
ಒಂದೂರಿನ ಒಂದು ಮನೆಯ
ಒಬ್ಬವ್ಯಕ್ತಿಯ
ಈ ವಿಳಾಸಕ್ಕೆ ತಿಳಿಸಿಬಿಡಿ
*****[೧೯೮೨]



೧೨

ಗೆಳೆಯನಿಗೆ

ಅಷ್ಟ ಬಾಹುಗಳ ಚಾಚಿ
ಆಗಸವನೆ ಹಿಡಿವ ದುಸ್ಸಾಹಸವು
ದೂರ -ಬಹು ದೂರ
ಅಧ್ಯಯನ ಗುರಿ ನೇರ
ಗುರಿಯಿಂದ ಗುರಿಯಡೆಗೆ

ಮಾತು ,
ಮೌನ ಚಿಪ್ಪೊಡೆದು ಪುಟನೆಗೆವ
ಚೆಂಡು : ಅದಮ್ಯ
ಉತ್ಸಾಹದ ಹುಮ್ಮಸಕೆ ಇಲ್ಲ
ಅಡೆತಡೆ

ನಡಿಗೆಯೊ ದನಿವರಿಯದ
ಕುದುರೆ ಕುಕ್ಕೋಟ :
ನಡೆ , ಚಿನ್ನದೊಡವೆ ಅಪ್ಪಟ
ಒಪ್ಪ ಓರಣದ ಕ್ಲುಪ್ತ ಪಾಠ

ಪದವಿ ಪ್ರತಿಷ್ಟೆಯ ಹಿಗ್ಗು
ಅವ್ಯಕ್ತ_ವ್ಯಕ್ತ ಚಿತ್ರ :
ಆಪ್ತ ಅಭಿನಂದನೆಗೂ
ನಿರ್‍ಲೇಪ -ನಿರ್‍ಲಿಪ್ತ |
******[೦೧-೦೧-೧೯೯೮]
[ಚಕ್ರಸಾಲಿ ಲಿಂಗಪ್ಪ ಅವರಿಗೆ ಡಾ. ಪದವಿ ಪಡೆದಾಗ ಬರೆದದ್ದು]

೧೩
ದಯಮಾಡು ಬೇಗ
ದಯಮಾಡು ಬೇಗ ಓ ಅತಿಥಿ
ಗರ್ಭದಲಿ ಹೂತು
ಸೌರಭವ ಸೂಸುತಲಿ
ಎಲ್ಲ ಇಂದ್ರಿಯ ಸುಖವ
ಬಗೆ ನೋಟವೊಂದರಲಿ
ಅಡಕಿರಿಸಿ ಕದಿರುವೆ
ರಸನ-ಶ್ರವಣಗಳಿಗಿಲ್ಲ ಭೇದ
ದಯ ಮಾಡು ಬೇಗ

ಬಗೆ ಬಾನಿನೊಳಗೆಲ್ಲ
ನಿನ್ನ ನಿನ್ನದೇ ಚಿತ್ರ
ಚಿತ್ತದಾಚೆಗೂ ಹಬ್ಬಿ
ಹಂದರದ ತುಂಬ
ಮಲಿಗೆಯ ನಕ್ಷತ್ರ
ಸಾಲದಾಗಿವೆ ನಮ್ಮ
ಈ ಎರಡೂ ಕಣ್ಣುಗಳು

ಜೀಕಿ ಜೋಕಾಲಿ
ನೂರಾರು ಬಣ್ಣಗಳು
ಹದಮಡಿ ಮುದಗೊಂಡ
ರಂಗವಲ್ಲಿಯ ಬೆಡಗು |
ಯಮಾಡು ಬೇಗ
ಓ ಅತಿಥಿ
ಸಿದ್ಧವಾಗಿದೆ ಹಾಯಿ-ಹಡಗು
*******[೧೯೯೬]
೧೪
ಅಣಕು ವಚನಗಳು

ನೌಕರಿ ನಿಮ್ಮ ದಾನ
ಕಾರು ನಿಮ್ಮ ದಾನ
ವಾಸಿಸುವ ಭವ್ಯ ಬಂಗಲೆಯೂ ನಿಮ್ಮ ದಾನ
ನಿಮ್ಮ ದಾನವನುಂಡು
ಅನ್ಯ ತಂದೆ ತಾಯಿಗಳ ಹೊಗಳುವ
ಕುನ್ನಿಗಳನೇನೆಂಬೆನಯ್ಯಾ ಕಡದಳ್ಳಿ ಕಲ್ಮೇಶ |

ಸಾಕಿ ಸಲುಹಿದೊಡೆ ಒಲ್ಲೆ
ಸಾಲಿ ಕಲಿಸಿದೊಡೆ ಒಲ್ಲೆ
ನೌಕರಿ ಕೊಡಿಸಿದೊಡೆ ಒಲ್ಲೆ
ನೀವು ಬೆವರು ಸುರಿಸಿ ಗಳಿಸಿದ್ದನ್ನು
ವರದಕ್ಷಿಣೆಯಾಗಿ ಕೊಟ್ಟರೆ
ನಿಮ್ಮ ಮಗಳೇ ಎನ್ನ ಮನದನ್ನೇ ಕಾಣಾ
ಕಡದಳ್ಳಿ ಕಲ್ಮೇಶ

ನೌಕರಿಗೆ ಕೊಡುವ ಕಾಣಿಕೆಗಾಗಿ
ಕನ್ಯೆನೋಡುತ್ತಿದ್ದರೆ ವರನೆಂಬರು
ನೌಕರಿಯ ವೆರನನ್ನೇ ಭೇಡಿ
ಮನೆಯಲ್ಲಿ ಕುಳಿತಿದ್ದರೆ ಕನ್ಯೆ ಎಂಬರು
ಇವರೀರ್ವರನು ದಂಪತಿಗಳಾಗಿಸುವುದು
ಕಾಮವೂ ಅಲ್ಲ ಪ್ರೇಮವೂ ಅಲ್ಲ
ವರದಕ್ಷಿಣೆ ಎಂಬ ಪಂಚಾಕ್ಷರಿ ಮಂತ್ರ ಕಾಣಾ
ಕಡದಳ್ಳಿ ಕಲ್ಮೇಶ

ಆಸೆಯಿಲ್ಲದ ,ಅಧಿಕಾರವಿಲ್ಲದ ಚಲುವಂಗಾನು ಒಲಿದೆನವ್ವ
ಕುಲವಿಲ್ಲದ ನೆಲೆಯಿಲ್ಲದ ನಿಸ್ಸೀಮ ಚಲುವಂಗಾನು ಒಲಿದೆನವ್ವ
ಇದು ಕಾರಣ ಪ್ರೀತಿಸಿದವನೇ ನನಗೆ ಗಂಡನವ್ವ
ಕಡದಳ್ಳಿ ಕಲ್ಮೇಶ
ವರದಕ್ಷಿಣೆಗೆ ಬಾಯಿ ಬಿಡುವ ಈ ಗಂಡರನೊಯ್ದು
ಒಲೆಯೋಳಗಿಕ್ಕು ತಾಯೆ |






೧೫

ಹೆದರುವದೇಕಂತೆ |

ಅನಂತ ವಿಶ್ವದ ಅದ್ಭತ ಗಳಿಗೆಯ
ನೋಡಲು ಹೆದರುವದೇಕಂತೆ
ಕೂತಿರು ಸುಮ್ಮನೆ ಬಿಡು ಚಿಂತೆ

ಮುಗಿಲೇಹರಿದು ನೆಲಕಪ್ಪಳಿಸಲಿ
ಗ್ರಹ ನಕ್ಷತ್ರ ಡಿಕ್ಕಿಹೊಡೆಯಲಿ
ಲಾವಾರಸವು ತಾಂಡವವಾಡಲಿ
ಜ್ವಾಲಾಮಖಿಯು ಬೆಂಕಿಯನುಗಳಲಿ
ನೋಡಲು ಹೆದರುವದೇಕಂತೆ

ಭೂಮಿಗೆ ಭೂಮಿಯೆ ಗಡಗಡ ನಡುಗಲಿ
ಭೂಕಂಪನವು ತಕಧಿಮಿ ಕುಣಿಯಲಿ
ಗಿರಿಪರ್ವತಗಳು ಬುಡಮೇಲಾಗಲಿ
ಅಖಂಡ ಪೃಥ್ವಿಯೇ ತುಂಡ ತುಂಡಾಗಲಿ
ನೋಡಲು ಹೆದರುವದೇಕಂತೆ

ಕೋಲ್ಮಿಂಚ ಫಳ್ಳನೆ ಮುಗಿಲನು ಸೀಳಲಿ
ಗುಡುಗು ಸಿಡಿಲು Sಡ್ ಖಡ್ ಸಿಡಿಯಲಿ
ಚಂಡ ಮಾರುತ ಭರ್ ಭರ್ ಬೀಸಲಿ
ಬಿಡದೆ ಜಡಿಮಳೆ ಧೋ ಧೋ ಸುರಿಯಲಿ
ನೋಡಲು ಹೆದರುವದೇಕಂತೆ

ಉರಿ ಉರಿ ಬಿಸಿಲು ಧಗ ಧಗ ಉರಿಯಲಿ
ಚಳಿ ಚಳಿ ಗಾಳಿಯು ಹಿಮವನ್ನೆರಚಲಿ
ಕಪ್ಪನೆ ಧೂಳು ಬಾನಿಗೆ ಮುಸುಕಲಿ
ಕಾಳ ಕತ್ತಲೆ ಗವ್ವನೆ ಕವಿಯಲಿ
ನೋಡಲು ಹೆದರುವದೇಕಂತೆ

ವಿಸ್ಮಯಗಳಿಗೆ ಕಣ್ತೆರೆದಿಟ್ಟು
ಕೂತಿರು ಸುಮ್ಮನೆ ಬಿಡು ಚಿಂತೆ










೧೬

ಅದ್ಭುತ ಬಾವಲಿ

ಬಾವಲಿ ಬಾವಲಿ ಕರಿಮುಖ ಬಾವಲಿ
ತಲೆ ಕೆಳಗಾಗಿ ಜೋಲುತಲಿದ್ದವು
ಚರ್ಚಿನ ಗೊಪುರ ಗಂಟೆಯ ಬದಿಯಲಿ
ಹಿಂಡಿಂಡಾಗಿ ಜೋಲುತಲಿದ್ದವು

ದಿನವು ತಪ್ಪದೆ ಚರ್ಚಿನ ಪಾದ್ರಿಯು
ನೋಡುತಲಿದ್ದ ಅವುಗಳನು
ಹಗಲಲಿ ಹಾರವು ಕುರುಡರು ಏನೋ
ಪರಿಕಿಸಿ ಬಿಡುವೆನು ಕಂಗಳನು

ಎನ್ನುತ ಒಂದಿನ ಚೀಲಕೆ ತುಂಬಿದ
ಸಿಕ್ಕಷ್ಟೆಲ್ಲಾ ಬವಲಿಯ
ತಂತಿಯ ಬಿಗಿದು ದಾರವ ಕಟ್ಟಿ
ಮನೆ ತುಂಬಿಸಿದ ಬಲೆಯನ್ನು

ಮೇಣವ ಮೆತ್ತಿ ಕಣ್ಣನು ಮುಚ್ಚಿ
ಹಾರಲು ಬಿಟ್ಟ ಮನೆಯಲ್ಲಿ
ದಾರಕೆ ತಾಗದೆ ತಂತಿಗೆ ಬಡಿಯದೆ
ಹಾರಾಡಿದವು ಲೀಲೆಯಲಿ

ಬಾವಲಿ ಕಂಡು ಅಚ್ಚರಿಗೊಂಡು
ಮೂಗಿನ ಮೇಲೆ ಬೆರಳಿಟ್ಟ
ಕಣ್ ಮುಚ್ಚಿದರೂ ಹಾರುವ ಶಕ್ತಿಯ
ತಿಳಿಯಲು ಕಣ್ಣಾಗ ಕಣ್ಣಿಟ್ಟ

ಮರುದಿನ ಮತ್ತೆ ಗೋಪುರ ಹತ್ತಿ
ಬಾವಲಿ ತುಂಬಿದ ಚೀಲಕ್ಕೆ
ಮೇಣವ ಮೆತ್ತಿದ ಬಾವಲಿ ಕಂಡು
ಕುತೂಹಲಗೊಂಡ ಸೋಜಿಗಕೆ

ಕಣ್ಮುಚ್ಚಿದರೂ ಹಾರುತ ಹೇಗೆ
ಬಂದವು ಬಾವಲಿ ಗೋಪುರಕೆ
ಬೇಟೆಯನಾಡಲು ಕಣ್-ಬೇಕಿಲ್ಲವೆ
ಎನ್ನುತ ನಿಂತನು ಆಕ್ಷಣಕೆ

ಚೂರಿ ಹಾಕಿ ಹೊಟ್ಟೆ ಸಿಗಿದು
ನೋಡಿದರಚ್ಚರಿ ಕಾದಿತ್ತು
ಹೊಟ್ಟೆಯ ತುಂಬ ಕ್ರಿಮಿ ಕೀಟಗಳ
ಹಿಂಡಿಗೆ ಹಿಂಡೆ ತುಂಬಿತ್ತು


ಮೇಣವ ಮೆತ್ತಿದ ಮೇಲೂ ಬಾವಲಿ
ಹೇಗೆ ಕ್ರಿಮಿಗಳಹಿಡಿದಿತ್ತು
ಬೇಟಯ ಆಡಲು ಕಣ್ಣೆ ಬೇಡವೆ
ಯಾವಿಂದ್ರಿಯದೀ ಕಸರತ್ತು

ಚರ್ಚಿನ ಪಾದ್ರಿಯು ಲೋಕಕೆ ಸಾರಿದ
ಬಾವಲಿ ವಿಸ್ಮಯ ಜೀವನವ
ಧರ್ಮಕೆ ಸಲ್ಲದ ಸಂಗತಿ ಎಂದು
ತಲೆ ಕೆಟ್ಟೋಯ್ತು ಜನಗಳದು

ಪಾದ್ರಿಯ ಮಾತನು ನಂಬಿದ ಜೂರ್‍ನೆ
ಬಾವಲಿ ಬೆನ್ನನು ಹತ್ತಿದನು
ಹಿಂಡು ಹಿಂಡು ಬಾವಲಿ ತಂದು
ಕಿವಿಗೆ ಮೇಣವ ಮೆತ್ತಿದನು

ಕೋಣೆಯ ಒಳಗಡೆ ಹಾರಲು ಬಿಟ್ಟರೆ
ಡಿಕ್ಕಿ ಹೊಡೆಯುತ ಬಳಲಿದವು
ಕಣ್ಣೇ ಕಾಣದ ಕುರುಡರ ಹಾಗೆ
ದಿಕ್ಕು ತೋರದೆ ಬಳಲಿದವು

ಪಟ ಪಟ ಪಟ ಪಟ ರೆಕ್ಕೆಯ ಬಡಿಯುತ
ಗೋಡೆಗೆ ಹಾಯ್ದವು ಒಂದಿಷ್ಟು
ಪಿಳಿ ಪಿಳಿ ಪಿಳಿಪಿಳಿಕಣ್ಣನು ಬಿಡುತ
ಕಂಗಾಲಾದವು ಮತ್ತಷ್ಟು

ಅಚ್ಚರಿ ಅಚ್ಚರಿ ಇದು ಬಲು ಅಚ್ಚರಿ
ಕಣ್ಣಿಲ್ಲದೆ ಇವು ಹಾರುವವು
ಕಿವಿಗಳಮುಚ್ಚಲು ಹಾರಲು ಬಾರದು
ಹೊಸತೊಂದಚ್ಚರಿ ಸಾರುವವು

ಬಾವಲಿಗೇತಕೆ ಕಂಗಳು ಇಹವು
ಕೆಲಸವೆ ಇಲ್ಲೆಂದುಸುರಿದನು
ಕಿವಿಯೇ ಕಣ್ಣಿನ ಕೆಲಸವ ಮಾಡುವ
ವೆಂಬುದ ಜಗಕೆ ಸಾರಿದನು

ಇಬ್ಬರು ಮೂರ್ಖರು , ಎಳ್ಳಷ್ಟಿಲ್ಲ
ಬುದ್ಧಿಯು ಅವರ ತಲೆಯಲ್ಲಿ
ಬಾವಲಿಗಲ್ಲ ತಮಗೆಮೇಣವ
ಮೆತ್ತಿ ಕೊಂಡರೊ ಕಣ್ಣಿನಲಿ-

ಎನ್ನುತ ಜನತೆ ರೊಚ್ಚಿಗೆ ಎದ್ದರು
ಪಾದ್ರಿ ಜೂರ್‍ನೆ ಸಲುವಾಗಿ
ಖ್ಯಾತ ವಿದ್ವಾಂಸ ಕುವೀರನಲ್ಲಿಗೆ
ನ್ಯಾಯವ ಒಯ್ದರು ಲಗುಬಗೆ


ಇಬ್ಬರು ಸುಳ್ಳು ಹೇಳಿದರೆಂದು
ಸಾರಿ ಬಿಟ್ಟ ನ್ಯಾಯವನು
ಸ್ಪರ್ಶ ಶಕ್ತಿಯೇ ಕಾರಣವೆಂದು
ಮಾಡಿದ ನಿಜಕನ್ಯಾಯವನು

ದಿನಗಳು ಹೀಗೆ ಕಳೆದವು ಯಾರೂ
ಬಾವಲಿ ಗೋಜಿಗೆ ಹೋಗ್ಲಿಲ್ಲ
ಕುವೀರನ ಮಾತೇ ನಂಬಿ ಬಿಟ್ಟರು
ನಿಜಸಂಗತಿ ಹೊರ ಬರಲಿಲ್ಲ

ನೂರ್ ಐವತ್ ವರುಷದ ನಂತರ
ಶೋಧನೆ ಮಾಡಿದ ಜೇಗ್ರಾಫ್
ಅಲಿಯ ವರೆಗೆ ತಜ್ಞರ ತಂಡ
ಕುಳಿತೇ ಬಿಟ್ಟಿತ್ತ ಗಪ್ ಚಿಪ್

ಜೆಗ್ರಾಫ್ ಮೊದಲು ಬಾವಲಿ ರೆಕ್ಕೆಯ
ನರಗಳನೆಲ್ಲ ಕತ್ತರಿಸಿ
ಕತ್ತಲ ಕೋಣೆಯಲ್ಹಾರಲು ಬಿಟ್ಟನು
ನೋಡಲು ಅವುಗಳ ಪರಿಕಿಸಿ

ದಾರಕೆ ತಾಗದೆ ತಂತಿಗೆ ಹಾಯದೆ
ಹಾರಿದವಡೆತಡೆ ತಪ್ಪಿಸಿ
ಕುವೀರನ ಹೇಳಿಕೆ ಬಿದ್ದೇ ಹೋಯಿತು
ಜೆಗ್ರಾಫ್ ತಲೆ ಮತ್ ಬಿಸಿಬಿಸಿ

ಏನೇ ಆಗಲಿ ಬಿಡಲು ಬಾರದು
ಎನ್ನುತ ಶೋಧಕೆ ತೊಡಗಿದನು
ತಮಾಷೆಗೆಂದು ಬಾವಲಿ ಬಾಯಿಗೆ
ಕಾಗದ ಟೊಪ್ಪಿಗೆ ತೊಡಿಸಿದನು

ಏನಿದು ಸೋಜಿಗ ಹಾರಲು ಬಾರದು
ತಲೆ ತಲೆ ಡಿಕ್ಕಿಯ ಹೊಡೆಯುತ್ತ
ಕುರುಡರ ಹಾಗೆ ಗೋಡೆಗೆ ಹಾಯ್ದವು
ನೆಲದಲಿ ಬಿದ್ದವು ತೆವಳುತ್ತ

ಬಾಯಿಗೆ ಟೊಪ್ಪಿಗೆ ಹಾಕಲು ಏತಕೆ
ಹಾರಲು ಬಾರದು ಬಾವಲಿಗೆ
ಬಾಯಿ ಕಿವಿಗಳಿಗೇನೊ ನಂಟು
ಇದೆಯಂದರಿತನು ಆಗಳಿಗೆ

ಬಾಯನು ತೆರೆಯುತ ಮುಚ್ಚುತ ಹಾರುವ
ಬಾವಲಿ ವರ್ತನೆ ಗಮನಿಸಿದ
ಬಾಯಿಂದ್ಮಾಡುವ ಶಬ್ದದ ಮೇಲೆಯೇ
ಹಾರುವವೆಂದು ಶೋಧಿಸಿದ


ಬಾಯಿಂದ್ಮಾಡಿದ ಸದ್ದದು ಎದುರಿನ
ವಸ್ತುವಿಗೋಗಿ ತಗುವದು
ಕಿವಿಯಿಂದದನು ಕೇಳುತ ಬಾವಲಿ
ವಾಯು ವೇಗದಿ ಸಾಗುವದು

ಆದರೂ ನಮ್ಮ ನಿಮ್ಮಯ ಕಿವಿಗೆ
ಬಾವಲಿ ಶಬ್ದವು ಕೇಳಿಸದು
ಸೀಟಿಯಂತಹ ಗಂಟಲಿನಿಂದ
ಮಿಲಿಯನ್ ಕಂಪನ ಸೂಸುವದು

ಧ್ವನಿ ಕಂಪನದ ಯಂತ್ರಗಳಿಂದ
ಗ್ರಿಫನ್ ಸದ್ದನು ಕೇಳಿದನು
ಬಾವಲಿ ಶಬ್ದವ ಕೇಳಿದನು
ಬಾವಲಿ ಹಾರುವ ವಿಸ್ಮಯ ಲೋಕದ
ಒಗಟನ್ನವನು ಬಿಡಿಸಿದನು
ಒಗಟಿಗೆ ಉತ್ತರ ಹುಡುಕಿದನು

ಶ್ರವನಾತೀತ ಶಬ್ದ ಗ್ರಹಣ
ಬಾವಲಿಗಿರುವ ವರದಾನ
ಸುಪರ್ ಕಂಪೂಟರ್‌ಮೀರಿಸುವಂತಹ
ಇಂದ್ರಿಯ ಹೊಂದಿದೆ ಪರಿಪೂರ್ಣ

ಪ್ರಕೃತಿ ವಿಸ್ಮಯ ಅಗಾಧವಾದುದು
ಇಂತಿಷ್ಟೆಂದು ಗೊತ್ತಿಲ್ಲ
ಮಾನವ ಜೀವಿಗೆ ವಿಸ್ಮಯ ತೋರುತ
ಒಳಗುಟ್ಟನ್ನದು ಬಿಟ್ಟಿಲ್ಲ
******




ಕುಂತ ಕೇಳಿರಿ ಸರ್ವ ಜನ ಎಲ್ಲ ಕೌತುಕದ ಮಾತೊ
ಭಾವದ ಒಳಗೆ ಗಾಯವ ಮಾಡಿದ
ಮನಸಿನ ಒಳಗೆ ಗಾಯವ ಮಾಡಿದ
ಹೆಗ್ಗೋಡಿನ ಶಿಬಿರೋ

ದೂರದ ಊರೂರಿಂದ ಎಲ್ಲರ ಸೇರಿಸಿ
ಶಿಬಿರವ ನಡಿಸ್ಯಾರೊ
ಸಂಸ್ಕೃತಿ ಶಿಬಿರವ ನಡಿಸ್ಯಾರೊ


ಮೊದಲಗಿತ್ತಿಯ ಗೋಳನು ದರ್ಶಿಸಿ
ಕೃಷ್ಣೇಗೌಡರ ಅವಸ್ಥೆಯಲಿರಿಸಿ
ವೆನಿಸಿನ ವ್ಯಾಪಾರ ಬೀಜವ ಬಿತ್ತಿದರೋ
ಅಕ್ಷರ ಬೀಜವ ಬಿತ್ತಿದರೋ
ಸಂಸ್ಕೃತಿ ಬೆಳೆಯನು ಬೆಳೆದಿಹರೊ
ಶೇಕ್ಸಪಿಯರನ ಮನದಲಿ ತುಂಬಿದರೋ

ಕವಿ ಕಲಾವಿದ ರಸಿಕರ ಸೇರಿಸಿ ಚಿಂತನ ನಡಿಸಿಹರೋ
ಚಿತ್ರ ಕಾವ್ಯದ ಒಗಟನು ಬಿಡಿಸಿ
ಗೀತ ಗಾಯನದಲೆಯನು ಎಬ್ಬಿಸಿ
ಗಮಕ ವಾಚನದ ಅಭಿರುಚಿ ಸುರಿಸಿ
ಭರತ ವರ್ಷದ ದರ್ಶನ ಮಾಡಿದರೊ ವಿಶ್ವದ
ಅಂತ:ಸ್ಫೂರ್ತಿಯ ತುಂಬಿದರೋ


ಜನಪದ ಸಂಸ್ಕೃತಿ ಗುಟ್ಟನು ಬಿಡಿಸಲು ಕತೆಯನು ಹೇಳಿದರೋ
ನಮ್ಮ ನಿಮ್ಮ ಕತೆಯನು ಹೇಳಿದರೋ

ರಸ ಗಂಧ ತುತ್ತೆ ಸಸ್ಯವ ಕುದಿಸಿ
ಮಾನವ ಚಿನ್ನದ ದಾಹಕ್ಕೆಳಿಸಿ
ನಾಗಾರ್ಜುನಗೆ ಹುಚ್ಚನು ಹಿಡಿಸಿದರೊ
ಚಿರಂಜೀವಿ ನಾಗಗೆ ಹುಚ್ಚನು ಹಿಡಿಸಿದರೋ ಕಂಬಾರ
ಮತಿನಂತ ಮೂರು ಮಾತನು ಹೇಳಿದರೋ
ರಸಿಕರ ಹುಚ್ಚನು ಬಿಡಿಸಿದರೊ


ಗಾಂಧಿ ತಾತನ ಮೊಮ್ಮಗನನ್ನು ಕರೆದು ತಂದಿಹರೋ
ದ್ವೇಷವಿಲ್ಲದ ಮುಂಗುಲಿ ತನ್ನ
ದೇಹವ ಮಾಡಿಕೊಂಡಿತು ಚಿನ್ನ
ಸಿಂಧುತ್ವ ಸಂಸ್ಕೃತಿ ದರ್ಶನ ನೀಡಿದರೋ

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಡದಳ್ಳಿ ಊರವನೋ

ಕಲ್ಮೇಶನನ್ನು ಮನದಲ್ಲಿ ಸ್ಮರಿಸಿ
ಕುಂದದ ಪದಗಳ ಚಂದದಿ ಪೋಣಿಸಿ
ಹಾಡನು ಕಟ್ಟಿಹನೋ ಚಂದ್ರಗೌಡ
ಹಾಡನು ಹಾಡುವನೋ
ಎಲ್ಲರಿಗೆ ವಿದಾಯ ಹೇಳುವನೋ

###***###
೧೮-೧೦-೨೦೦೩
[ಹೆಗ್ಗೋಡು-ಸಂಸ್ಕೃತಿ ಶಿಬಿರ]


ಕತ್ತಲೆ ನಾಡೊಳಗ ಎತ್ತೆತ್ತ ನೋಡಿದರ
ಹುತ್ತ ಬೆಳೆದಿತ್ತೊ ಹುಡಿಗಟ್ಟಿ / ಬಾಬಾಸಾಯ್ಬ
ಕಿತ್ತ ಒಗೆದಾನೊ ಛಲದಿಂದ

ಒತ್ತೆಯ ಆಳಾಗಿ ತೊತ್ತಿನ ಮಗನಾಗಿ
ಕತ್ತಿ ದುಡಿದಂಗ ದುಡಿವಂಥ/ ಜನಗಳು
ಸತ್ತು ಹುಟ್ಟತಿದ್ದರೊ ದಿನದಿನ

ಸತ್ತಸತ್ತ ಹುಟ್ಟುವಂಥ ಜನಗಳ ಉದ್ಧಾರಕ್ಕ
ಚಿತ್ತವಿಟ್ಟ ಕೆಲಸ ಮಾಡ್ಯಾನ /ಬಾಬಾಸಾಯ್ಬ
ಕತ್ತಲೆಯ ದೂರ ಮಾಡ್ಯಾನೊ

ಕi ಕರ್ಮ ಎಂದು ಕೊಳೆಯುತ್ತ ಬಿದ್ದವಗೆ
ಮರ್ಮದ ಗುಟ್ಟು ತಿಳಿಸ್ಯಾನೊ/
ಮರ್ಮದ ಗುಟ್ಟು ತಿಳಿಸುತ್ತ/ ದಲಿತರಿಗೆ
ಸೊಮ್ಮಿನ ಬಾಳು ಕೊಟ್ಟಾನೊ